ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಹನಿಟ್ರ್ಯಾಪ್ ಪ್ರಕರಣ ಸದನದಲ್ಲಿ ಎತ್ತಲು ಹೇಳಿದ್ದೇ ಸಿದ್ದರಾಮಯ್ಯ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ.
ನಿನ್ನೆ ಸದನದಲ್ಲಿ ಸಚಿವ ಕೆಎನ್ ರಾಜಣ್ಣ ನಮ್ಮದೇ ಪಕ್ಷದ ನಾಯಕರು, ವಿಪಕ್ಷ ನಾಯಕರು, ಕೇಂದ್ರ ನಾಯಕರು ಸೇರಿದಂತೆ 48 ನಾಯಕರ ಹನಿಟ್ರ್ಯಾಪ್ ಆಗಿದೆ. ನನ್ನನ್ನು ಎರಡು ಬಾರಿ ಹನಿಟ್ರ್ಯಾಪ್ ಮಾಡಲು ಯತ್ನಿಸಿದ್ದರು ಎಂದು ಬಾಂಬ್ ಹಾಕಿದ್ದರು. ಇದಕ್ಕೆ ಬಿಜೆಪಿ ಶಾಸಕ ಮುನಿರತ್ನ ಕೂಡಾ ಧ್ವನಿಗೂಡಿಸಿದ್ದು, ನನ್ನನ್ನು ಡಿಕೆ ಶಿವಕುಮಾರ್ ಟ್ರ್ಯಾಪ್ ಮಾಡಿದ್ದರು ಎಂದಿದ್ದರು.
ಇದೇ ವಿಚಾರವಾಗಿ ಇಂದೂ ಸದನದಲ್ಲಿ ಗದ್ದಲವೇರ್ಪಟ್ಟಿತ್ತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಆರ್ ಅಶೋಕ್ ಇದು ಸಿಎಂ ಕುರ್ಚಿಗಾಗಿಯೇ ನಡೆಯುತ್ತಿರುವ ಹನಿಟ್ರ್ಯಾಪ್ ಎಂದಿದ್ದಾರೆ.
ಈ ಹನಿಟ್ರ್ಯಾಪ್ ವಿಚಾರವನ್ನು ಕೆಎನ್ ರಾಜಣ್ಣ ಬಾಯಲ್ಲಿ ಹೇಳಿಸಿದ್ದೇ ಸಿದ್ದರಾಮಯ್ಯನವರು. ಇದೆಲ್ಲಾ ಅಧಿಕಾರಕ್ಕಾಗಿ ನಡೆಯುತ್ತಿರುವ ಮಸಲತ್ತು ಎಂದು ಅವರು ಆರೋಪಿಸಿದ್ದಾರೆ.