ಬೆಂಗಳೂರು: ಅಭಿವೃದ್ಧಿಗೆ ದುಡ್ಡಿಲ್ಲದೆ ಈಗಾಗಲೇ ಮನಿಟ್ರ್ಯಾಪ್ ನಲ್ಲಿ ಸಿಲುಕಿರುವ ಕಾಂಗ್ರೆಸ್ ಸರ್ಕಾರದಲ್ಲಿ ಈಗ ಹನಿ ಟ್ರ್ಯಾಪ್ ಸದ್ದು ಜೋರಾಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಲೇವಡಿ ಮಾಡಿದ್ದಾರೆ.
ಇಂದು ಸದನದಲ್ಲಿ ಎದ್ದಿರುವ ಹನಿಟ್ರ್ಯಾಪ್ ಪ್ರರಕಣ ಸಂಬಂಧ ಅವರು ಎಕ್ಸ್‌ನಲ್ಲಿ ಪೋಸ್ಟ್ ಹಾಕಿ ಕಾಂಗ್ರೆಸ್‌ನ ಕಾಲೆಳೆದಿದ್ದಾರೆ.
ಆರ್ ಅಶೋಕ್ ಹಂಚಿಕೊಂಡ ಪೋಸ್ಟ್‌ನಲ್ಲಿ ಏನಿದೆ. ತಮ್ಮ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ ಸದನದಲ್ಲಿ ಆರೋಪಿಸಿರುವ ಸಹಕಾರ ಸಚಿವ ಕೆಎನ್ ರಾಜಣ್ಣ ಅವರು ತನಿಖೆಗೆ ಆಗ್ರಹಿಸಿದ್ದಾರೆ. ರಾಜಣ್ಣನವರ ಆರೋಪಕ್ಕೆ ದನಿಗೂಡಿಸಿರುವ ಮತ್ತಿಬ್ಬರು ಹಿರಿಯ ಸಚಿವರಾದ ಸತೀಶ್ ಜಾರಕಿಹೊಳಿ ಹಾಗು ಸಿ ಮಹಾದೇವಪ್ಪ ಅವರು ಸಹ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಆದರೆ ಕನ್ನಡಿಗರಿಗೆ ಕಾಡುತ್ತಿರುವ ಯಕ್ಷ ಪ್ರಶ್ನೆ ಏನಪ್ಪಾ ಅಂದರೆ, ಹನಿಟ್ರ್ಯಾಪ್ ಜಾಲದ ಬಗ್ಗೆ ಬಹಿರಂಗವಾಗಿ ದನಿ ಎತ್ತಿರುವ ಸಚಿವರೆಲ್ಲರೂ ಸಿಎಂ ಸಿದ್ದರಾಮಯ್ಯ ಅವರ ಬಣದಲ್ಲಿ ಗುರಿತಿಸಿಕೊಂಡಿರುವವರು ಎನ್ನುವುದು ಕಾಕತಾಳೀಯವೋ ಅಥವಾ ಇದರ ಹಿಂದೆ ರಾಜಕೀಯ ಷಡ್ಯಂತ್ರವೇನಾದರೂ ಇದೆಯೋ?