ಸಿಗರೇಟು ಬಿಟ್ಟ ದಿನ ನೆನೆದ ಸಿದ್ದರಾಮಯ್ಯ: ಆರೋಗ್ಯದ ಗುಟ್ಟು ಬಿಚ್ಚಿಟ್ಟ ಸಿಎಂ

Krishnaveni K

ಗುರುವಾರ, 6 ಜೂನ್ 2024 (15:18 IST)
ಬೆಂಗಳೂರು : ದೈಹಿಕವಾಗಿ ಚಟುವಟಿಕೆ ಇಲ್ಲದೆ ಕುಳಿತವರಿಗೆ ಅನಾರೋಗ್ಯ ಹೆಚ್ಚು. ಆದ್ದರಿಂದ ದೈಹಿಕ ಮತ್ತು ಮಾನಸಿಕ ಚಟುವಟಿಕೆ ಅಗತ್ಯ
ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
 
ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಜೀವನಶೈಲಿ ಮತ್ತು ಆಹಾರ ಪದ್ಧತಿ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ರಾಜ್ಯ ಸರ್ಕಾರ ಎಲ್ಲಾ ಜನ ವರ್ಗಕ್ಕೆ ಆರೋಗ್ಯ ಮತ್ತು ಅಗತ್ಯ ಚಿಕಿತ್ಸೆಗೆ ಒದಗಿಸಲು ಕಾರ್ಯಕ್ರಮಗಳನ್ನು ನಿರಂತರವಾಗಿ ರೂಪಿಸಿ, ಜಾರಿ ಮಾಡುತ್ತಿದ್ದೇವೆ ಎಂದರು. 
 
ಕ್ಯಾನ್ಸರ್ ನಂತಹ ಮಾರಕ ರೋಗವನ್ನೂ ಗುಣಪಡಿಸುವುದು ಸಾಧ್ಯವಿದೆ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರೆ ದೀರ್ಘಕಾಲ ಆರೋಗ್ಯ ಕಾಪಾಡಿಕೊಳ್ಳುವುದು ಸಾಧ್ಯವಿದೆ ಎಂದರು. ಹಿಂದಿನವರ ಆರೋಗ್ಯ ಪದ್ಧತಿ ಮತ್ತು ಶ್ರಮಾಧಾರಿತ ಜೀವನ ಶೈಲಿ ಅವರನ್ನು ಗಟ್ಟಿಮುಟ್ಟಾಗಿ ಸದೃಡವಾಗಿ ಇಟ್ಟಿತ್ತು ಎಂದರು. ಇಂಥಾ ಆರೋಗ್ಯ ತಪಾಸಣಾ ಶಿಬಿರಗಳು ಮೇಲಿಂದ ಮೇಲೆ ಆಗಬೇಕು. ರಾಜ್ಯದ ಮೂಲೆ ಮೂಲೆಗಳಲ್ಲೂ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ತುಂಬಾ ವಯಸ್ಸಾದ ಮೇಲೆ ಬರುವ ಆರೋಗ್ಯ ಸಮಸ್ಯೆಗಳು ಬರದಂತೆ ವಯಸ್ಸಿದ್ದಾಗಲೇ ಪ್ರಯತ್ನಿಸಿ ಎಂದು ಕರೆ ನೀಡಿದರು. 
 
 
1987 ಆಗಸ್ಟ್ 27 ಕ್ಕೆ ಸಿಗರೇಟ್ ಬಿಟ್ಟೆ
 
ಸಹವಾಸ ದೋಷದಿಂದಲೂ ಅನಾರೋಗ್ಯ ತರುವ ಚಟಗಳು ಅಂಟಿಕೊಳ್ಳುತ್ತವೆ. ಆದರೆ ಸದಾ ಎಚ್ಚರದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು. ನಾನೂ ಮೊದಲು ಸಿಗರೇಟ್ ಸೇದುತ್ತಿದ್ದೆ. ಒಮ್ಮೆ ವಿದೇಶಕ್ಕೆ ಹೋದಾಗ ಸ್ನೇಹಿತರು ಸಿಗರೇಟ್ ಪ್ಯಾಕ್ ತಂದುಬಿಟ್ಟಿದ್ದರು. ನಾನು ಕಡಿಮೆ ಅವಧಿಯಲ್ಲಿ ಹೆಚ್ಚು ಸಿಗರೇಟ್ ಸೇದಿಬಿಟ್ಟೆ. ಅವತ್ತೇ ನನಗೆ ಮನವರಿಕೆ ಆಯ್ತು. ಮನವರಿಕೆ ಆಗಿದ್ದು ಆಗಸ್ಟ್ 27 ನೇ ತಾರೀಕಿನಂದು. ಅದೇ ದಿನ ಸಿಗರೇಟ್ ಸೇದುವುದನ್ನು ಸಂಪೂರ್ಣ ನಿಲ್ಲಿಸಿದೆ ಎಂದು ನೆನಪಿಸಿಕೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ