ಬೆಂಗಳೂರು: ನನಗೂ 100 ವರ್ಷ ಬದುಕಬೇಕೆಂಬ ಆಸೆಯಿದೆ. ಆದರೆ ನನಗೆ ಮಧುಮೇಹವಿದೆ. 100 ವರ್ಷ ಬದುಕುತ್ತೀನೋ ಇಲ್ವೋ ಗೊತ್ತಿಲ್ಲ. ಹೀಗಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಆಯೋಜಿಸಲಾಗಿದ್ದು ರಮಣಶ್ರೀ ಶರಣ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಹೀಗೆ ಹಾಸ್ಯದ ದಾಟಿಯಲ್ಲಿ ಮಾತನಾಡಿದ್ದಾರೆ. ರಮಣಶ್ರೀ ಪ್ರಶಸ್ತಿಗೆ ಭಾಜನರಾದ ಹಿರಿಯರು 100 ವರ್ಷ ಬದುಕಲಿ ಎಂದು ಹಾರೈಸಿದ್ದಾರೆ. ನನಗೂ 100 ವರ್ಷ ಬದುಕುವ ಆಸೆ. ಆದರೆ ಅದು ಆಗುತ್ತೋ ಇಲ್ವೋ ಗೊತ್ತಿಲ್ಲ ಎಂದಿದ್ದಾರೆ.
ಮಧುಮೇಹದಿಂದ ಬಳಲುತ್ತಿರುವ ಕಾರಣ 100 ವರ್ಷ ಬದುಕಲು ನನಗೆ ಸಾಧ್ಯವಾಗದು. ವೇದಿಕೆಯಲ್ಲಿರುವ ಸಂಸದ ಬಸವರಾಜ ಬೊಮ್ಮಾಯಿಯವರಿಗೂ ಮಧುಮೇಹ ಸಮಸ್ಯೆಯಿದೆ ಎಂದು ಸಿದ್ದರಾಮಯ್ಯ ನಗುತ್ತಲೇ ಮಾತನಾಡಿದ್ದಾರೆ. ರಾಜಕಾರಣಿಗಳಿಗೆ ಶಿಸ್ತಿನ ಬದುಕು ಬದುಕಲು ಸ್ವಲ್ಪ ಕಷ್ಟ. ಇದಕ್ಕೆ ಬೊಮ್ಮಾಯಿಯವರೂ ಉದಾಹರಣೆ ಎಂದಾಗ ನೆರೆದಿದ್ದವರು ಜೋರಾಗಿ ನಕ್ಕರು.
ಇನ್ನು ರಮಣಶ್ರೀ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದಿಸಿದ ಸಿಎಂ ಸಿದ್ದರಾಮಯ್ಯ, ಬಸವಣ್ಣನವರಿಗೆ ಸಂಬಂಧಪಟ್ಟ ಯಾವ ಕಾರ್ಯಕ್ರಮವನ್ನೂ ನಾವು ಮಿಸ್ ಮಾಡಲ್ಲ. ಬಸವಣ್ಣನವರ ತತ್ವಗಳಲ್ಲಿ ಕೆಲವನ್ನಾದರೂ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.