ಅನ್ನ ಭಾಗ್ಯ ಕೊಟ್ಟವರು ಯಾರು, ಬಿಜೆಪಿಯವರಲ್ಲ ನಾನು ಮಾಡಿದ್ದು: ಸಿದ್ದರಾಮಯ್ಯ

Krishnaveni K

ಸೋಮವಾರ, 18 ನವೆಂಬರ್ 2024 (11:28 IST)
ಬೆಂಗಳೂರು: ಬಿಪಿಎಲ್ ಕಾರ್ಡ್ ರದ್ದತಿ ಬಗ್ಗೆ ವಿಪಕ್ಷಗಳು ಟೀಕೆ ಮಾಡುತ್ತಿರುವುದಕ್ಕೆ ಇಂದು ತಿರುಗೇಟು ಕೊಟ್ಟಿರುವ ಸಿಎಂ ಸಿದ್ದರಾಮಯ್ಯ ಅನ್ನ ಭಾಗ್ಯ ಕೊಟ್ಟವರು ಯಾರು? ನಾನು ಮಾಡಿದ್ದು, ಸಿದ್ದರಾಮಯ್ಯ ಮಾಡಿದ್ದು ಎಂದು ಹೇಳಿದ್ದಾರೆ.

ಖಜಾನೆ ಬರಿದಾಗಿದೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ರದ್ದು ಮಾಡಿದೆ ಎಂದು ವಿಪಕ್ಷಗಳು ಟೀಕೆ ಮಾಡ್ತಿವೆ ಎಂದು ಮಾಧ್ಯಮದವರು ಪ್ರಶ್ನಿಸಿದಾಗ ಸಿದ್ದರಾಮಯ್ಯ ಗರಂ ಆದರು. ನಾವು ಯಾವ ಬಡವರಿಗೂ ಅನ್ಯಾಯ ಮಾಡುತ್ತಿಲ್ಲ. ಬಿಪಿಎಲ್ ಕಾರ್ಡ್ ಅನರ್ಹರಿಗೆ ಮಾತ್ರ ರದ್ದು ಮಾಡಿದ್ದೇವೆ. ಅರ್ಹರಿಗೆ ಅಲ್ಲ. ಅರ್ಹರಿಗೆ,  ಬಡವರಿಗೆ ನಾವು ಬಿಪಿಎಲ್ ಕಾರ್ಡ್ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬಳಿಕ ತಮ್ಮದೇ ಶೈಲಿಯಲ್ಲಿ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ ‘ರೀ.. ಅನ್ನ ಭಾಗ್ಯ ಯೋಜನೆ ಕೊಟ್ಟವರು ಯಾರು? ಬಿಜೆಪಿಯವರು ಕೊಟ್ರಾ? ನಾನು ಮಾಡಿದ್ದು, ಅಂದರೆ ಸಿದ್ದರಾಮಯ್ಯ ಮಾಡಿದ್ದು. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕೊಟ್ಟಿದ್ದಾರಾ? ಗುಜರಾತ್ ನಲ್ಲಿ ಇದ್ಯಾ? ಮಧ್ಯಪ್ರದೇಶದಲ್ಲಿ ಮಾಡಿದ್ದಾರಾ? ಬಿಜೆಪಿಯವರು ಸುಮ್ನೇ ಮಾತನಾಡ್ತಾರೆ’ ಎಂದಿದ್ದಾರೆ.

ಇನ್ನು, ರಾತ್ರೋರಾತ್ರಿ ಬಿಪಿಎಲ್ ಕಾರ್ಡ ರದ್ದು ಮಾಡಲಾಗಿದೆ ಎಂಬ ಆರೋಪಗಳಿಗೂ ಉತ್ತರಿಸಿರುವ ಅವರು, ದಿಡೀರ್ ಅಂತ ಯಾವುದೂ ಮಾಡಿಲ್ಲ. ಎಲ್ಲಾ ಸರಿಯಾಗಿ ನೋಡಿಕೊಂಡೇ ಮಾಡಿರೋದು. ಅರ್ಹರಾದವರಿಗೆ ಮಾತ್ರ ಸಿಗಲಿ ಎಂಬ ಉದ್ದೇಶಕ್ಕೆ ಮಾಡಿರೋದು ಎಂದು ಸಿದ್ದರಾಮಯ್ಯ ಸಮಜಾಯಿಷಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ