ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಸೂಕ್ತ: ಕಾಂಗ್ರೆಸ್ ಮುಖಂಡ ಕೆ.ಬಿ.ಕೋಳಿವಾಡ ಒತ್ತಾಯ

Sampriya

ಗುರುವಾರ, 26 ಸೆಪ್ಟಂಬರ್ 2024 (14:35 IST)
ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಹಗರಣ ಸಂಬಂಧಿಸಿದಂತೆ ತನಿಖೆಗೆ ಹೈಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿದೆ. ಬಿಜೆಪಿ, ಜೆಡಿಎಸ್‌ ಮಾತ್ರವಲ್ಲ ಕಾಂಗ್ರೆಸ್‌ ಪಕ್ಷದ ಮುಖಂಡರೇ ಮುಖ್ಯಮಂತ್ರಿ ರಾಜೀನಾಮೆ ನೀಡುವುದು ಸೂಕ್ತ ಎನ್ನುತ್ತಿದ್ದಾರೆ.

ಬೇರೆ ಬೇರೆ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಅಲ್ಲೂ ಸಿದ್ದರಾಮಯ್ಯ ವಿಚಾರ ಪ್ರಸ್ತಾಪಿಸಿ ವಿಪಕ್ಷಗಳು ಮಾತನಾಡುತ್ತಿವೆ. ಆದ್ದರಿಂದ ಪಕ್ಷಕ್ಕೆ ಮುಜುಗರ ಆಗುತ್ತಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು  ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಕೆ.ಬಿ.ಕೋಳಿವಾಡ ಒತ್ತಾಯಿಸಿದರು.  

ತನಿಖೆ ಎದುರಿಸಿ ಸಿಎಂ ನಿಷ್ಕಳಂಕಿತರು ಎಂಬುದು ಸಾಬೀತಾದ ಮೇಲೆ ಮತ್ತೆ ಅವರೇ ಮುಖ್ಯಮಂತ್ರಿ ಆಗಲಿ. ಸಿಎಂ ರಾಜೀನಾಮೆ ಕೊಡಲ್ಲ ಎನ್ನುತ್ತಿರುವುದು ಅವರ ಅಭಿಪ್ರಾಯ. ಅವರು ರಾಜೀನಾಮೆ ಕೊಡಬೇಕು ಎಂಬುದು ನಮ್ಮ ಅಭಿಪ್ರಾಯ ಎಂದು ತಿಳಿಸಿದರು.

ನನಗೂ ಸಿಎಂಗೂ ಹಿಂದೆ ಭಿನ್ನಾಭಿಪ್ರಾಯ ಇದ್ದರೂ ಈಗ ಆತ್ಮೀಯವಾಗಿ ಇದ್ದೇವೆ. ಆದರೂ ಪಕ್ಷಕ್ಕೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ಅವರು ರಾಜೀನಾಮೆ ಕೊಡಬೇಕು ಅನ್ನೋದು ನನ್ನ ಅಭಿಪ್ರಾಯ. ನನ್ನ ಜೊತೆ ಬೇರೆ ಯಾವ ನಾಯಕರು ಇಲ್ಲ. ನನ್ನ ವೈಯಕ್ತಿಕ ಅಭಿಪ್ರಾಯ ನಾನು ಹೇಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ