ಬೆಂಗಳೂರು: ಹಿಂದೂ ಧರ್ಮದಲ್ಲಿ ಸಮಾನತೆ ಇದ್ದಿದ್ದರೆ ಜನ ಮತಾಂತರ ಯಾಕೆ ಆಗುತ್ತಿದ್ದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಕ್ಕೆ ಈಗ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ಜಾತಿ ಗಣತಿ ಸಮೀಕ್ಷೆಯಲ್ಲಿ ಕ್ರಿಶ್ಚಿಯನ್ ಧರ್ಮದಲ್ಲಿ ಹಿಂದೂ ಉಪಜಾತಿಗಳನ್ನು ಸೇರಿಸಿರುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಮತಾಂತರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುವಾಗ ಸಿಎಂ ಸಿದ್ದರಾಮಯ್ಯ ಹಿಂದೂ ಧರ್ಮದಲ್ಲಿ ಸಮಾನ ಅವಕಾಶಗಳಿದ್ದರೆ ಜನ ಯಾಕೆ ಮತಾಂತರಗೊಳ್ಳುತ್ತಿದ್ದರು ಎಂದು ಪ್ರಶ್ನೆ ಮಾಡಿದ್ದರು.
ಆದರೆ ಸಿಎಂ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು ಈ ಹೇಳಿಕೆ ಮೂಲಕ ಸಿದ್ದರಾಮಯ್ಯನವರೇ ಪರೋಕ್ಷವಾಗಿ ಮತಾಂತರವನ್ನು ಪ್ರಚೋದಿಸುತ್ತಿದ್ದಾರೆ ಎಂದಿದ್ದಾರೆ. ಆರ್ ಅಶೋಕ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸಿಎಂಗೆ ಧೈರ್ಯವಿದ್ದರೆ ಮುಸ್ಲಿಮ್ ಧರ್ಮದಲ್ಲಿರುವ ಅಸಮಾನತೆ ಬಗ್ಗೆ ಪ್ರಶ್ನಿಸಲಿ ಎಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಸಾಕಷ್ಟು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಈ ಹೇಳಿಕೆಯಿಂದ ಹಿಂದೂಗಳಲ್ಲೇ ಜಾತಿ ನಡುವೆ ಒಡಕು ಉಂಟು ಮಾಡಲಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.