ಬೆಂಗಳೂರು: ನನ್ನ ಮೇಲೆ ಯಾವುದೇ ಕಳಂಕ ಇಲ್ಲ. ಇಷ್ಟು ವರ್ಷದ ರಾಜಕೀಯದಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯಿಲ್ಲ ಎನ್ನುವ ಸಿಎಂ ಸಿದ್ದರಾಮಯ್ಯ ಮೇಲೆ ಇದು ಮೂರನೇ ಬಾರಿಗೆ ಇತ್ತೀಚೆಗಿನ ದಿನಗಳಲ್ಲಿ ಅಪವಾದ ಕೇಳಿಬಂದಿದೆ.
ಇದೀಗ ಸಿಎಂ ಸಿದ್ದರಾಮಯ್ಯ ಮೇಲೆ ಗಣಿ ಗುತ್ತಿಗೆ ನವೀಕರಣಕ್ಕೆ ಅಕ್ರಮವಾಗಿ ಒಪ್ಪಿಗೆ ನೀಡಿದ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ 2015 ರಲ್ಲಿ 500 ಕೋಟಿ ರೂ. ಕಿಕ್ ಬ್ಯಾಕ್ ಪಡೆದಿದ್ದರು ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ನೀಡಿದ್ದಾರೆ.
ಇತ್ತೀಚೆಗಷ್ಟೇ ಸಿದ್ದರಾಮಯ್ಯ ಮೇಲೆ ಮುಡಾ ಹಗರಣದ ಆರೋಪ ಕೇಳಿಬಂದಿತ್ತು. ಕೊನೆಗೆ ಲೋಕಾಯುಕ್ತ ತನಿಖೆ ನಡೆಸಿ ಕ್ಲೀನ್ ಚಿಟ್ ನೀಡಿದ್ದರು. ಆದರೆ ರಾಜ್ಯ ಸರ್ಕಾರದ ಅಧೀನದಲ್ಲೇ ಇರುವ ಲೋಕಾಯುಕ್ತ ತನಿಖೆ ಬಗ್ಗೆಯೇ ಹಲವರಿಗೆ ಅನುಮಾನಗಳಿವೆ.
ಇದಕ್ಕೆ ಮೊದಲು ಸಿಎಂ ಸಿದ್ದರಾಮಯ್ಯ ದುಬಾರಿ ಕೈಗಡಿಯಾರ ಉಡುಗೊರೆ ಪಡೆದು ವಿವಾದಕ್ಕೀಡಾಗಿದ್ದರು. ಬಳಿಕ ಅದನ್ನು ಹಿಂದಿರುಗಿಸುವ ಮೂಲಕ ವಿವಾದಕ್ಕೆ ಅಂತ್ಯ ಹಾಡಲಾಯಿತು. ಆದರೆ ತಮ್ಮ ರಾಜಕೀಯ ಜೀವನದಲ್ಲಿ ಒಂದೇ ಒಂದು ಅಪವಾದವಿಲ್ಲ ಎನ್ನುವ ಸಿಎಂ ಸಿದ್ದರಾಮಯ್ಯ ಮೇಲೆ ಇತ್ತೀಚೆಗಿನ ವರ್ಷಗಳಲ್ಲಿ ಕೇಳಿಬರುತ್ತಿರುವ ಮೂರನೆಯ ಹಗರಣ ಆರೋಪ ಇದಾಗಿದೆ ಎನ್ನುವುದು ಉಲ್ಲೇಖನೀಯ.