ಜ್ಞಾನಯೋಗಾಶ್ರಮ ಮಠದ ಸಿದ್ದೇಶ್ವರ ಸ್ವಾಮೀಜಿ ವಿಧಿವಶ

ಮಂಗಳವಾರ, 3 ಜನವರಿ 2023 (07:06 IST)
ವಿಜಯಪುರ : ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಜ್ಞಾನಯೋಗಿ ಆಶ್ರಮದ ಸಿದ್ದೇಶ್ವರ ಸ್ವಾಮೀಜಿ(82) ವಿಧಿವಶರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿದ್ದೇಶ್ವರ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಉಂಟಾಗಿ ವೈದ್ಯರ ತಂಡ ಚಿಕಿತ್ಸೆಯಲ್ಲಿ ನಿರತವಾಗಿತ್ತು. ಆಶ್ರಮದ ಕೊಠಡಿಯಲ್ಲೇ ಚಿಕಿತ್ಸೆ ಮುಂದುವರಿದಿತ್ತು.
ಜಿಲ್ಲಾಧಿಕಾರಿ ಡಾ. ವಿಜಯ ಮಾಂತೇಶ ದಾನಮನ್ನವರ, ಎಸ್ಪಿ ಎಚ್. ಡಿ.ಆನಂದ್ ಕುಮಾರ್ ಹಾಗೂ ಹಲವು ಮಠಾಧೀಶರು ಆಶ್ರಮದ ಆವರಣದಲ್ಲಿ ಬೀಡು ಬಿಟ್ಟಿದ್ದರು.  ಆದರೆ ಚಿಕಿತ್ಸೆ ಫಲಿಸದೇ  ಇಂದು ಸಂಜೆ 6:05ಕ್ಕೆ ಸ್ವಾಮೀಜಿ ಲಿಂಗೈಕ್ಯರಾದರು.

ಕಳೆದ ನಾಲ್ಕು ದಿನಗಳಿಂದ ಸಿದ್ದೇಶ್ವರ ಸ್ವಾಮೀಜಿ ಅನಾರೋಗ್ಯದಿಂದ ಬಳಲುತ್ತಿದ್ದರು. ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಸ್ಥಿರವಾಗಿತ್ತು. ಆದರೆ ಮಧ್ಯಾಹ್ನ ಮತ್ತು ಸಂಜೆಯ ಹೆಲ್ತ್ ಬುಲೆಟಿನ್ನಲ್ಲಿ ಸ್ವಾಮೀಜಿಗೆ ಉಸಿರಾಟ ತೊಂದರೆ ಜಾಸ್ತಿಯಾಗಿದೆ. ಸ್ವಾಮೀಜಿ ಬಿಪಿ ಸ್ವಲ್ಪ ಕಡಿಮೆಯಾಗಿದೆ.

ಸ್ವಾಮೀಜಿ ಆಹಾರ ತೆಗೆದುಕೊಳ್ಳುತ್ತಿಲ್ಲ. ಆದರೂ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದೆ. ನಾವು ನಮ್ಮ ಶಕ್ತಿ ಮೀರಿ ಪ್ರಯತ್ನ ಪಡುತ್ತಿದ್ದೇವೆ. ಸ್ವಾಮೀಜಿ ಆಸ್ಪತ್ರೆಗೆ ಬರಲು ಒಪ್ಪುತ್ತಿಲ್ಲ. ಏನು ಚಿಕಿತ್ಸೆ ಕೊಡುತ್ತಿರೋ ಇಲ್ಲೇ ಕೊಡಿ ಸ್ವಾಮೀಜಿ ಹೇಳಿದ್ದರು ಎಂದು ಹೆಲ್ತ್ ಬುಲೆಟಿನ್ನಲ್ಲಿ ವೈದ್ಯರು ತಿಳಿಸಿದ್ದರು.

ಡಿ.31ರಂದು ಭೇಟಿ ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಶ್ರೀಗಳ ದರ್ಶನ ಪಡೆದಿದ್ದರು. ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಿದ್ದರು. ಶ್ರೀಗಳು ಪ್ರಧಾನಿ ಮೋದಿ ಅವರ ಜತೆ ಫೋನಿನಲ್ಲಿ ಮಾತನಾಡಿಸಿದ್ದರು. ಉನ್ನತ ಚಿಕಿತ್ಸೆ ನೀಡುವುದರ ಬಗ್ಗೆ ಪ್ರಧಾನಿಯವರು ಚರ್ಚಿಸಿದಾಗ ಕೈ ಮುಗಿದು ಧನ್ಯವಾದ ಅರ್ಪಿಸಿದ್ದರು. ಅಲ್ಲದೆ ಗುರುಗಳ ಕಿಡ್ನಿ, ಹೃದಯ, ಶ್ವಾಸಕೋಶ ಪ್ಯಾರಾಮೀಟರ್ಸ್ ಸಾಮಾನ್ಯವಾಗಿದೆ ಎಂಬುದಾಗಿ ಸಿಎಂ ತಿಳಿಸಿದ್ದರು.

ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ವಿಜಯಪುರದ ಜ್ಞಾನಯೋಗಾಶ್ರಮ ಮಠಕ್ಕೆ ಸುತ್ತೂರು ಶ್ರೀಗಳೂ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ