ಅನ್ನ ಭಾಗ್ಯದಲ್ಲಿ ಕನ್ನ ಅಕ್ರಮ

ಸೋಮವಾರ, 14 ಮಾರ್ಚ್ 2022 (17:10 IST)
ರಾಜ್ಯದಲ್ಲಿ ಬಡವರಿಗೆ ವಿತರಣೆ ಮಾಡಬೇಕಾದ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿ, ಕಾಳಸಂತೆ ವ್ಯವಹಾರ ಮಾಡಿದವರ ವಿರುದ್ಧ 394 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
 
ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಎಸ್.ರವಿ ಅವರ ಪ್ರಶ್ನೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರ ಪರವಾಗಿ ಉತ್ತರಿಸಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪತ್ತೆಯಾದ ಪ್ರಕರಣಗಳಲ್ಲಿ 371ರಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ.
42,469.32 ಕ್ವಿಂಟಾಲ್ ಅಕ್ಕಿ, 960.89 ಕ್ವಿಂಟಾಲ್ ಗೋಧಿ, 1570.45 ಕ್ವಿಂಟಾಲ್ ನುಚ್ಚಕ್ಕಿ, 22,115 ಭತ್ತ, 598.38 ಕ್ವಿಂಟಾಲ್ ರಾಗಿ, 3.50 ಕ್ವಿಂಟಾಲ್ ಬೇಳೆಯನ್ನು ವಶ ಪಡಿಸಿಕೊಳ್ಳಲಾಗಿದೆ, ಇದರ ಮೌಲ್ಯ 14,23,70,764 ರೂಪಾಯಿಗಳು ಎಂದು ವಿವರಿಸಿದ್ದಾರೆ.
 
ಪಡಿತರ ಅಕ್ರಮದಲ್ಲಿ ಬೆಂಗಳೂರು ಜಿಲ್ಲೆಯ ಗೋದಾಮು ವ್ಯವಸ್ಥಾಪಕರು, ಕಲಬುರಗಿ ಜಿಲ್ಲೆಯಲ್ಲಿನ ಅಕ್ರಮದಲ್ಲಿ ಉಗ್ರಾಣ ವ್ಯವಸ್ಥಾಪಕು ಭಾಗಿಯಾಗಿದ್ದು, ಇವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955ರ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
 
ರಾಜ್ಯದಲ್ಲಿ 20,084 ನ್ಯಾಯಬೆಲೆ ಅಂಗಡಿಗಳ ಪೈಕಿ, ಸಮಪರ್ಕ ಇಂಟರ್ ನೆಟ್ ಸೌಲಭ್ಯ ಇರುವ 20,016 ನ್ಯಾಯಬೆಲೆ ಅಂಗಡಿಗಳನ್ನು ಗಣಕೀತೃ ಪಾಯಿಂಟ್ ಆಫ್ ಸೇಲ್ ವ್ಯವಸ್ಥೆಗೆ ಪರಿವರ್ತಿಸಿ ಬಯೋ ದೃಢೀಕರಣ ಮೂಲಕ ಪಡಿತರ ವಿತರಿಸಲಾಗುತ್ತಿದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ