ನಿನ್ನೆ ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಬಳಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಅವರ ಅಂತ್ಯ ಸಂಸ್ಕಾರ ಇಂದು ನೆರವೇರಿಸಲಾಯಿತು. ಜಮಖಂಡಿ ತಾಲ್ಲೂಕಿನ ನಾಗನೂರ ಬಳಿ ಇರುವ ಸಿದ್ದು ನ್ಯಾಮಗೌಡ ಒಡೆತನದ ಜಮಖಂಡಿ ಸಕ್ಕರೆ ಕಾರ್ಖಾನೆ ಆವರಣದ ಮುಂಭಾಗದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.ಗದುಗಿನ ತೋಂಟದಾರ್ಯ ಸ್ವಾಮೀಜಿಗಳು, ಮುತ್ತಿನಕಂತಿ ಮಠದ ಶ್ರೀಗಳ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಸಲಾಯಿತು.
ಇದಕ್ಕೂ ಮುನ್ನ ಸಕಲ ಸರ್ಕಾರಿ ಗೌರವಗೊಂದಿಗೆ ಗೌರವ ಸಂತಾಪ ಸೂಚಿಸಲಾಯ್ತು. ಈ ವೇಳೆ ಶಾಸಕರ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಜರಾಗಿದ್ದರು. ಅಮೆರಿಕದಲ್ಲಿ ನೆಲೆಸಿರುವ ಇನ್ನೊಬ್ಬ ಪುತ್ರಿ ಶೋಭಾ ನ್ಯಾಮಗೌಡರಿಗೆ ತಂದೆಯ ಅಂತ್ಯಕ್ರಿಯೆ ಯಲ್ಲಿ ಭಾಗವಹಿಸಲು ಆಗಲಿಲ್ಲ. ಇನ್ನು ನ್ಯಾಮಗೌಡ ಅವರ ಧರ್ಮ ಪತ್ನಿ ಸುಮಿತ್ರಾ ದುಃಖದ ಕಟ್ಟೆ ಒಡೆದಿತ್ತು. ಸಾವಿರಾರು ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.ನ್ಯಾಮಗೌಡ ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ ತೋಂಟದಾರ್ಯ ಶ್ರೀಗಳು ಸಿದ್ದು ನ್ಯಾಮಗೌಡ ರೈತರ ಕಾಳಜಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.ಇತರೆ ರಾಜಕಾರಣಿಗಳು ಅವರ ರಾಜಕೀಯ ಆದರ್ಶ ರೂಡಿಸಿಕೊಳ್ಳಬೇಕು ಅದೆ ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ ಎಂದರು.
ಇನ್ನೂ ಇದಕ್ಕೂ ಮುನ್ನ ಮಾಜಿ ಸಿಎಂ ಸಿದ್ರಾಮಯ್ಯ, ಡಿಸಿಎಂ ಜಿ.ಪರಮೇಶ್ವರ, ಮಾಜಿ ಸಚಿವ ಎಂಬಿ ಪಾಟೀಲ್, ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಸಂಸದ ಪಿಸಿ ಗದ್ದಿಗೌಡ ಸೇರಿದಂತೆ, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಜಮಖಂಡಿ ನಗರದ ತಾಲೂಕ ಕ್ರೀಡಾಂಗಣದಲ್ಲಿ ಇಡಲಾಗಿದ್ದ ಸಿದ್ದು ನ್ಯಾಮಗೌಡ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ನ್ಯಾಮಗೌಡ ಅವರ ಅಂತಿ ದರ್ಶನಕ್ಕೆ ಸಾಗರೋಪಾದಿಯಲ್ಲಿ ಜನ ಸಾಗರ ಹರಿದು ಬಂದಿತ್ತು. ಜಮಖಂಡಿ ನಗರದಿಂದ ಸಕ್ಕರೆ ಕಾರ್ಖಾನೆ ವರೆಗೆ ನಡೆದ ಸಂತಿಮ ಮೆರವಣಿಗೆಯಲ್ಲಿ ಮಾರ್ಗಮಧ್ಯದ ಹಳ್ಳಿ ಹಳ್ಳಿಗಳಲ್ಲಿ ರಸ್ತೆ ಬದಿಯಲ್ಲಿ ನಿಂತು ಜನನಾಯಕನ ಅಂತಿಮ ದರ್ಶನ ಪಡೆದರು. ಸಿದ್ದು ನ್ಯಾಮಗೌಡ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಜಿ.ಪರಮೇಶ್ವರ ಮತ್ತು ಮಾಜಿ ಸಿಎಂ ಸಿದ್ರಾಮಯ್ಯ ಸಿದ್ದು ನ್ಯಾಮಗೌಡ ರ ವ್ಯಕ್ತಿತ್ವನ್ನ ಕೊಂಡಾಡಿದ್ರು. ಸಿದ್ದು ನ್ಯಾಮಗೌಡ ಅವರ ಸಾವು ಕಾಂಗ್ರೆಸ್ ಪಕ್ಷಕ್ಕೆ ಮತ್ತು ಈ ಸಮಾಜಕ್ಕೆ ದೊಡ್ಡ ನಷ್ಟವಾಗಿದೆ ಅಂತ ನೋವು ತೋಡಿಕೊಂಡರು
ಶಾಸಕರ ಪುತ್ರರಾದ ಆನಂದ್ ನ್ಯಾಮಗೌಡ, ಮತ್ತು ಬಸವರಾಜ್ ನ್ಯಾಮಗೌಡ ಅವರು ಶೋಕಸಾಗರದಲ್ಲಿ ಮುಳುಗಿದ್ದರು.ಪಾರ್ಥೀವ ಶರೀರದ ವಾಹನದಲ್ಲಿ ಕುಳಿತಿದ್ದು,ತಂದೆ ಸಾವಿನಿಂದ ಕಣ್ಣೀರಾಗಿದ್ರು. ಒಟ್ಟಿನಲ್ಲಿ ರೈತರ ಶ್ರೇಯೋಭಿವೃದ್ಧಿಗೆ ಜೀವನ ಮುಡುಪಾಗಿಟ್ಡದ್ದ ರೈತ ನಾಯಕನ ಅಗಲಿಕೆಯಿಂದ ಸಾವಿರಾರು ಅಭಿಮಾನಿಗಳ ಅನಾಥವಾಗಿದ್ದಾರೆ. ನ್ಯಾಮಗೌಡ ಅವರ ಕುಟುಂಬಸ್ಥರಿಗೆ ಅವರ ಸಾವಿರಾರು ಅಭಿಮಾನಿಗಳಿಗೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎನ್ನುವುದೇ ಪ್ರತಿಯೊಬ್ಬ ನಾಗರಿಕರ ಹಾರೈಕೆಯಾಗಿದೆ.