ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕರು ವಕ್ಫ್ ಆಸ್ತಿ ಕಬಳಿಸುವುದು, ಐಎಂಎ ಹಗರಣ, ಅಮಾನತ್ ಬ್ಯಾಂಕ್ ದಿವಾಳಿ ಮುಂತಾದ ಪ್ರಕರಣಗಳಿಂದ ಮುಸ್ಲಿಮರ ಮಧ್ಯೆ ಕುಖ್ಯಾತಿ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಮುಸ್ಲಿಮರ ಹೊಸ ಪೀಳಿಗೆಯ ಪ್ರಾಮಾಣಿಕ ನಾಯಕರನ್ನು ಬೆಳೆಸಲು ಯತ್ನಿಸಿದೆ. ಹಾಗೆಂದೇ ಸಿಂದಗಿ ಮತ್ತು ಹಾನಗಲ್ ನಲ್ಲಿ ಹೊಸ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿತ್ತು. ಆದರೆ ಜಮೀರ್ ಖಾನ್ , ಸಿದ್ದರಾಮಯ್ಯ ಮುಂತಾದವರಿಗೆ ಇದನ್ನು ಸಹಿಸಲು ಸಾಧ್ಯವಾಗಿಲ್ಲ. ಬಿಜೆಪಿ ಜೊತೆಗೆ ರಹಸ್ಯ ಒಪ್ಪಂದ ಮಾಡಿಕೊಂಡು ಅವರು ಮುಸ್ಲಿಂ ಅಭ್ಯರ್ಥಿಗಳನ್ನು ಸೋಲಿಸಿದ್ದಾರೆ ಎಂದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಪಕ್ಷದ ನೀತಿಯಂತೆ ಮುಂದಿನ ಚುನಾವಣೆಗಳಲ್ಲೂ ಹೊಸ ಮುಸ್ಲಿಂ ಯುವ ನಾಯಕತ್ವ ಬೆಳೆಸಲು ನಿರ್ಧರಿಸಿದ್ದಾರೆ. ಸೋಲು- ಗೆಲುವು ಚುನಾವಣೆಯಲ್ಲಿ ಸಹಜ. ಸಿಂದಗಿಯಲ್ಲಿ ಜೆಡಿಎಸ್ ಪಕ್ಷದ ನಾಯಕರನ್ನು ಪಕ್ಷಾಂತರ ಮಾಡಿಸಿ ತಮ್ಮ ಅಭ್ಯರ್ಥಿಯನ್ನಾಗಿ ಮಾಡಿದ ಕಾಂಗ್ರೆಸ್ ನಾಯಕರಿಗೆ ಅಲ್ಲಿನ ಮತದಾರರು ತಕ್ಕ ಉತ್ತರ ನೀಡಿದ್ದಾರೆ ಎಂದರು.