ನಿಧಿಗಾಗಿ ವಾಮಾಚಾರ; ಹೆಣ್ಣುಮಗು ಪತ್ತೆ!

ಬುಧವಾರ, 10 ನವೆಂಬರ್ 2021 (10:52 IST)
ರಾಮನಗರ : ಸಾತನೂರು ಸಮೀಪದ ಭೂಹಳ್ಳಿ ಗ್ರಾಮದಲ್ಲಿ ನಿಧಿ ಆಸೆಗೆ ಕಳೆದ ಅನೇಕ ವರ್ಷಗಳಿಂದ ಪೂಜೆ ಸಲ್ಲಿಸಿ, ವಾಮಾಚಾರ ನಡೆಸುತ್ತಿದ್ದವರನ್ನು ಮಂಗಳವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.
ವಿಜಯ ಕರ್ನಾಟಕ ಪತ್ರಿಕೆ ನೀಡಿದ್ದ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿದ ಸಾತನೂರು ಪೊಲೀಸರು, ಬರೊಬ್ಬರಿ 13 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಏನಿದು ಘಟನೆ?
ಸಾತನೂರು ಹೋಬಳಿಯ ಭೂಹಳ್ಳಿ ಗ್ರಾಮದಲ್ಲಿನ ಮನೆಯೊಂದರಲ್ಲಿ ಕಳೆದ ಅನೇಕ ವರ್ಷಗಳಿಂದಲೂ ವಾಮಾಚಾರ ನಡೆಯುತ್ತಿತು ಎನ್ನಲಾಗಿದೆ. ನಿಧಿ ಶೋಧಕ್ಕಾಗಿ ಈ ಪೂಜೆ ನಡೆಸಲಾಗುತಿದೆ ಎಂಬ ಆರೋಪವು ಕೇಳಿಬಂದಿತ್ತು. ಈ ಬಗ್ಗೆ ವಿಜಯ ಕರ್ನಾಟಕ ಪತ್ರಿಕೆಯು ಕಳೆದೊಂದು ವಾರದಿಂದ ಎಸ್ಪಿ ಅವರೊಟ್ಟಿಗೆ ಸಂಪರ್ಕ ಸಾಧಿಸಿತ್ತು. ಮಂಗಳವಾರ ರಾತ್ರಿ ಎರಡು ಕಾರುಗಳಲ್ಲಿ ಪೂಜೆಗೆಂದು ಬಂದಿದ್ದವರ ಬಗ್ಗೆ ವಿಜಯ ಕರ್ನಾಟಕ ಮಾಹಿತಿಯನ್ನು ಪೊಲೀಸ್ ಇಲಾಖೆಗೆ ನೀಡಿತ್ತು.
ಇದರ ಬೆನ್ನತ್ತಿದ್ದ ಪೊಲೀಸರು ರಾತ್ರೋ ರಾತ್ರಿ ದಾಳಿ ನಡೆಸಿ, ರೆಡ್ ಹ್ಯಾಂಡ್ ಆಗಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ಪೈಕಿ ಎಂಟು ಮಂದಿ ಹೊರ ಜಿಲ್ಲೆಯವರಾಗಿದ್ದು, ಇದರೊಂದಿಗೆ 4 ವರ್ಷದ ಹೆಣ್ಣು ಮಗುವನ್ನು ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಹೆಣ್ಣು ಮಗುವನ್ನು ನಿಧಿ ಆಸೆಗಾಗಿ ಬಲಿ ಕೊಡಲು ತಂದಿರಬಹುದು ಎಂಬ ಅನುಮಾನ ಕೂಡ ವ್ಯಕ್ತವಾಗಿದೆ. ಆರೋಪಿಗಳಿಗೆ ಗ್ರಾಮದಲ್ಲಿ ಮನೆ ಬಾಡಿಗೆಗೆ ನೀಡಿದ್ದ ಮಾಲೀಕ, ಆಕೆಯ ಪತ್ನಿ, ಇಬ್ಬರು ಮಕ್ಕಳು, ಮಾಲೀಕನ ಪತ್ನಿಯ ತಮ್ಮ ಸೇರಿದಂತೆ ಒಟ್ಟು 13 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳ ಜೊತೆ ಇದ್ದ 4 ವರ್ಷದ ಹೆಣ್ಣು ಮಗು ಯಾರಿಗೆ ಸೇರಿದ್ದು ಎಂಬ ವಿಚಾರ ಪೊಲೀಸರಿಗೆ ತಿಳಿದುಬಂದಿಲ್ಲ. ವಿಸ್ತೃತ ತನಿಖೆಯ ಬಳಿಕ ಎಲ್ಲಾ ಸತ್ಯ ವಿಚಾರಗಳು ಹೊರಬರಬೇಕಿದೆ. ಇನ್ನು ಹೆಣ್ಣು ಮಗುವನ್ನು ಆರೋಪಿಗಳು ನಿಧಿಗಾಗಿ ಬಲಿ ನೀಡಲು ಕರೆತರಲಾಗಿದೆ ಎಂದು ಪೊಲೀಸರು ಶಂಕಿಸಿದ್ದು, ದಾಳಿ ನಡೆಸಿದ ವೇಳೆ ಇಡೀ ಮನೆಯಲ್ಲೆಲ್ಲ ಗುಂಡಿಗಳು ಪತ್ತೆಯಾಗಿವೆ. ರಾತ್ರೋ ರಾತ್ರಿ ಪೂಜೆ ಸಲ್ಲಿಸಿ, ಬೆಳಗಾಗುವಷ್ಟರಲ್ಲಿ ಆರೋಪಿಗಳು ಪರಾರಿಯಾಗುತ್ತಿದ್ದರು. ಪೂಜೆ ವೇಳೆ, ಇಡೀ ಊರನ್ನೆ ಕಬ್ಜ ಮಾಡಿಕೊಳ್ಳಲು ರೌಡಿಗಳನ್ನು ಬಳಸಿಕೊಳ್ಳಲಾಗುತ್ತಿತ್ತು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ