ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ನೈರುತ್ಯ ಮುಂಗಾರು

ಭಾನುವಾರ, 8 ಆಗಸ್ಟ್ 2021 (20:45 IST)
ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾನುವಾರ ನೈರುತ್ಯ ಮುಂಗಾರು ಸಾಮಾನ್ಯವಾಗಿದ್ದು, ಉತ್ತರ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಬಹುತೇಕ ಎಲ್ಲ ಸ್ಥಳಗಳಲ್ಲಿ ಮಳೆಯಾಗಿದೆ. 
 
ಉತ್ತರ ಕನ್ನಡದ ಗೋಕರ್ಣದಲ್ಲಿ 18 ಸೆಂ.ಮೀ., ಶಿವಮೊಗ್ಗದ ಆಗುಂಬೆಯಲ್ಲಿ 8ಸೆಂ.ಮೀ., ಹುಂಚದಕಟ್ಟೆಯಲ್ಲಿ 7 ಸೆಂ.ಮೀ., ದಕ್ಷಿಣ ಕನ್ನಡದ ಸುಬ್ರಹ್ಮಣ್ಯ, ಧರ್ಮಸ್ಥಳ, ವಿಟ್ಲ, ಭಾಗಮಂಡಲದಲ್ಲಿ ತಲಾ 5 ಸೆಂ.ಮೀ., ಮಂಗಳೂರು, ಪುತ್ತೂರು, ಶೃಂಗೇರಿ, ಜಯಪುರ, ಮೈಸೂರಿನ ಸರಗೂರು, ತಾಳಗುಪ್ಪದಲ್ಲಿ ತಲಾ 4 ಸೆಂ.ಮೀ., ಹೊನ್ನಾವರ, ಶಿವಮೊಗ್ಗದ ಅನವಟ್ಟಿ, ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ತಲಾ 3 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಕೆ ಪ್ರಾದೇಶಿಕ ನಿರ್ದೇಶಕ ಸಿ.ಎಲ್. ಪಾಟೀಲ್ ತಿಳಿಸಿದ್ದಾರೆ.
 
ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್‌ 12ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು, ಉತ್ತರ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಆ.12ರವರೆಗೆ ಬಹುತೇಕ ಎಲ್ಲ ಕಡೆಗಳಲ್ಲಿ ಮಳೆಯಾಗುವ ಹೆಚ್ಚಿನ ನಿರೀಕ್ಷೆಯಿದೆ. 
 
ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಆಗಸ್‌ಟ್‌ 9ರಂದು ಯೆಲ್ಲೋ ಅಲರ್ಟ್ ಕೊಡಲಾಗಿದೆ.
 
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮುಂದಿನ ಎರಡು ದಿನ ಮಳೆಯಾಗುವ ನಿರೀಕ್ಷೆಯಿದೆ. ಗರಿಷ್ಠ ಉಷ್ಣಾಂಶ 29 ಹಾಗೂ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ