ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಹಮ್ಮಿಕೊಂಡಿರುವ ವಿಶೇಷ ನೊಂದಣಿ ಅಭಿಯಾನದಲ್ಲಿ, ಕಳೆದ ಮೂರು ಭಾನುವಾರಗಳಲ್ಲಿ 13,129 ಅರ್ಜಿಗಳು ಸ್ವೀಕೃತವಾಗಿರುತ್ತವೆ.
ಜಿಲ್ಲಾ ಚುನಾವಣಾಧಿಕಾರಿ-ಬೆಂಗಳೂರು ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಿನಾಂಕ: 08.11.2021 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ. ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ: 08.12.2021 ರವರೆಗೆ ಅವಕಾಶ ಕಲ್ಪಿಸಲಾಗಿರುತ್ತದೆ. ಸದರಿ ಅವಕಾಶವನ್ನು ಸಾರ್ವಜನಿಕರಿಗೆ ಸದುಪಯೋಗಪಡಿಸಿಕೊಳ್ಳುವ ಸಲುವಾಗಿ ವಿಶೇಷ ನೊಂದಣಿ ಅಭಿಯಾನವನ್ನು ನವೆಂಬರ್ ಮಾಹೆಯ ದಿನಾಂಕ: 7, 14, 21, 28ರ ಭಾನುವಾರಗಳಂದು ಹಮ್ಮಿಕೊಳ್ಳಲಾಗಿರುತ್ತದೆ. ಕಳೆದ 3 ಅಭಿಯಾನಗಳಿಂದ 13,129 ಅರ್ಜಿಗಳು ಸ್ವೀಕೃತವಾಗಿರುತ್ತವೆ.
ಅದರಂತೆ, ದಿನಾಂಕ: 28.11.2021 ಭಾನುವಾರ ವಿಶೇಷ ನೊಂದಣಿ ಅಭಿಯಾನದ ಅಂತಿಮ ದಿನವಾಗಿದ್ದು, ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರಗೆ, ಬಿಬಿಎಂಪಿಯ ಕಂದಾಯ ಅಧಿಕಾರಿಗಳು/ಸಹ ಕಂದಾಯ ಅಧಿಕಾರಿಗಳು/ವಾರ್ಡ್ ಕಛೇರಿಗಳು/ಮತಗಟ್ಟೆಗಳಲ್ಲಿ ಆಯೋಜಿಸಲಾಗಿರುತ್ತದೆ. ಮತದಾರರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಭಾರತ ಚುನಾವಣಾ ಆಯೋಗದ ಆದೇಶ ಸಂಖ್ಯೆ: 23/2021/ERS-(Vol-II), ದಿನಾಂಕ: 27.08.2021 ನಿರ್ದೇಶನದಂತೆ, ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ-2022 ಕಾರ್ಯವು ಪ್ರಗತಿಯಲ್ಲಿದ್ದು, ಯಾವುದೇ ಅರ್ಹ ಮತದಾರರು ಮತದಾನದಿಂದ ಹೊರಗುಳಿಯಬಾರದೆಂಬುದು ವಿಶೇಷ ನೊಂದಣಿ ಅಭಿಯಾನದ ಧೈಯೋದ್ದೇಶವಾಗಿದೆ.