ಡಿಕೆಶಿಯ ದಾಳದಂತೆ ಕುಣಿಯುತ್ತಿರುವ ಶ್ರೀರಾಮುಲು: ಆಪ್ತ ಮಿತ್ರನ ವಿರುದ್ಧ ಹೊಸ ಬಾಂಬ್ ಸಿಡಿಸಿದ ಜನಾರ್ದನ ರೆಡ್ಡಿ

Sampriya

ಗುರುವಾರ, 23 ಜನವರಿ 2025 (14:17 IST)
Photo Courtesy X
ಬೆಂಗಳೂರು: ಒಂದು ಕಾಲದಲ್ಲಿ ಆಪ್ತ ಗೆಳೆಯರಾಗಿದ್ದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಮಧ್ಯೆ ಇದೀಗ ಕಿತ್ತಾಟ ಜೋರಾಗಿ ನಡೆಯುತ್ತಿದೆ. ನಿನ್ನೆ ಶ್ರೀರಾಮುಲು ಅವರು ಅಸಮಾಧಾನ ಹೊರಹಾಕಿದ ಬೆನ್ನಲ್ಲೇ  ಜನಾರ್ದನ ರೆಡ್ಡಿ ಅವರು ಇದೀಗ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜನಾರ್ದನ ರೆಡ್ಡಿ, ಸತೀಶ್ ಜಾರಕಿಹೊಳಿಯನ್ನು ಮಣಿಸುವ ಸಲುವಾಗಿ ಶ್ರೀರಾಮುಲು ಅವರನ್ನು  ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಳ್ಳಲು ಡಿಕೆ ಶಿವಕುಮಾರ್ ಅವರು ಈ ಪ್ಲಾನ್ ಮಾಡಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಜನಾರ್ದನ ರೆಡ್ಡಿ ಅವರ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲವನ್ನು ಮೂಡಿಸುತ್ತಿದೆ.

ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಶ್ರೀರಾಮುಲು ನಾನು ಪಕ್ಷ ಬಿಡಲು ಸಿದ್ಧ ಎಂದು ಹೇಳಿದ್ದರು. ಈಗ ಜನಾರ್ದನ ರೆಡ್ಡಿ ಬಾಂಬ್‌ ಸಿಡಿಸುವ ಮೂಲಕ ಶ್ರೀರಾಮಲು ಕಾಂಗ್ರೆಸ್‌ ಹೋಗುವ ಸುಳಿವನ್ನು  ನೀಡಿದ್ದಾರೆ.

ಶ್ರೀರಾಮುಲು ಪಕ್ಷ ಬಿಡುವುದು ಅವರ ವೈಯಕ್ತಿಕ ವಿಚಾರ. ಹೋಗುವುದಾದರೆ ಅವರು ಹೋಗಲಿ.  ಶ್ರೀರಾಮುಲು ಪಕ್ಷ ಬಿಟ್ಟು ಹೋಗುವುದು ಹೊಸದೆನಲ್ಲ. ಈ ಹಿಂದೆ ಬಿಎಸ್‌ಆರ್‌ ಪಕ್ಷ ಮಾಡುವಾಗಲೇ ನಾನು ಬಿಜೆಪಿ ಪಕ್ಷ ಬಿಡಬೇಡ ಅಂತ ಹೇಳಿದ್ದೆ. ಈ ಸಂದರ್ಭದಲ್ಲಿ ಸಿಬಿಐ ನನ್ನನ್ನು ಬಂಧಿಸುತ್ತದೆ, ನಮಗೆ ಬಹಳ ಕಷ್ಟ ಇದೆ. ಹೀಗಾಗಿ ಸುಮ್ಮನಿದ್ದು ಪಕ್ಷ ತೊರೆಯಬೇಡ ಎಂದು ಸಲಹೆ ನೀಡಿದ್ದೆ.

ರಾಜಕೀಯ ಸಂಕಷ್ಟದ ಸಮಯದಲ್ಲಿ ನನ್ನ ಮಾತನ್ನು ಕೇಳಲಿಲ್ಲ. ಈಗ ಯಾರದ್ದೋ ಮಾತು ಕೇಳಿ ಬಿಜೆಪಿ ಬಿಡುವುದಾದರೆ ಬಿಡಲಿ. ನನ್ನ ಮೇಲೆ ಆರೋಪ ಮಾಡಿ ಹೋಗುವುದು ಬೇಡ. ಬಳ್ಳಾರಿ ಭಾಗದಲ್ಲಿ ಅವರು ಪಕ್ಷ ಬಿಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ