ಡಿನ್ನರ್ ಪಾಲಿಟಿಕ್ಸ್‌ ಗುದ್ದಾಟದ ನಡುವೆಯೂ ಹೊಸ ಘೋಷಣೆ ಮಾಡಿದ ಡಿಕೆ ಶಿವಕುಮಾರ್‌

Sampriya

ಬುಧವಾರ, 8 ಜನವರಿ 2025 (19:33 IST)
Photo Courtesy X
ಬೆಂಗಳೂರು: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ಗಾಂಧಿ ಭಾರತ ಕಾರ್ಯಕ್ರಮದ ಅಂಗವಾಗಿ ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಗಾಂಧಿ ಪ್ರತಿಮೆ ಅನಾವರಣ ಹಾಗೂ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶವನ್ನು ಇದೇ ಜ .21 ರಂದು ನಡೆಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಸಚಿವರಾದ ಪರಮೇಶ್ವರ್, ಕೆ.ಹೆಚ್. ಮುನಿಯಪ್ಪ, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕ ನೆಲಮಂಗಲ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಎಸ್.ರವಿ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಗಾಂಧಿ ಭಾರತ ಕಾರ್ಯಕ್ರಮವನ್ನು ಪಕ್ಷ ಈಗಾಗಲೇ ಆರಂಭಿಸಿದ್ದು, ಗಾಂಧೀಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಕಳೆದ ಡಿಸಂಬರ್ 26ಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಗಿತ್ತು. ಅಂದು ಸಂಜೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನರಾದ ಹಿನ್ನೆಲೆಯಲ್ಲಿ ಮರುದಿನದ ಕಾರ್ಯಕ್ರಮಗಳನ್ನು ಮುಂದೂಡಲಾಗಿತ್ತು ಎಂದರು.

ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಮ್ಮ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಮಾಡಲಾಗಿತ್ತು. ನಮ್ಮ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿಗಳು ಚರ್ಚೆ ಮಾಡಿ ಇದೇ ತಿಂಗಳು 21ರಂದು ಈ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. 1924ರ ಕಾಂಗ್ರೆಸ್ ಅಧಿವೇಶನದ ಕುರಿತ ಮಾಹಿತಿಗಳ ಪುಸ್ತಕ ಹಾಗೂ ಇತರೆ ಪುಸ್ತಕಗಳನ್ನು ಜ.21ರಂದು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

21ರಂದು ಬೆಳಗ್ಗೆ ಸುವರ್ಣಸೌಧದ ಬಳಿ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಎಲ್ಲಾ ಪಕ್ಷದ ಶಾಸಕರಿಗೂ ಆಹ್ವಾನ ನೀಡಲಾಗುವುದು. ಅಂದು ಮಧ್ಯಾಹ್ನ 12 ಗಂಟೆಗೆ "ಜೈ ಬಾಪು, ಜೈ ಭೀಮ್, ಜೈ ಸಂವಿಧಾನ" ಎಂಬ ಎಐಸಿಸಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶಕ್ಕೆ ಎಲ್ಲಾ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ 100 ಮಂದಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಾಗವಹಿಸಬೇಕು ಎಂದು ಕರೆ ನೀಡುತ್ತಿದ್ದೇವೆ. ಈ ಸಮಾವೇಶದಲ್ಲಿ ಬಾಗವಹಿಸುವ ನಾಯಕರ ಬಗ್ಗೆ  ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದರು.

ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜ.13 ರಂದು ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ಪಕ್ಷದ ಎಲ್ಲಾ ಪದಾಧಿಕಾರಿಗಳು, ಬ್ಲಾಕ್ ಹಾಗೂ ಜಿಲ್ಲಾಧ್ಯಕ್ಷರು, ಶಾಸಕರು, ವಿವಿಧ ಘಟಕಗಳ ಅಧ್ಯಕ್ಷರು, ಮಾಜಿ ಮಂತ್ರಿಗಳು, ಮಾಜಿ ಶಾಸಕರು ಭಾಗವಹಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲ ಅವರ ನೇತೃತ್ವದಲ್ಲಿ ನಡೆಯಲಿದೆ. ಸಂಜೆ 4 ಗಂಟೆಗೆ ಕೆಪಿಸಿಸಿ ಪದಾಧಿಕಾರಿಗಳ ಸಭೆ ನಡೆಸಲಿದ್ದು, ಸಂಜೆ 6 ಗಂಟೆಗೆ ಮುಖ್ಯಮಂತ್ರಿಗಳು ಶಾಸಕಾಂಗ ಪಕ್ಷದ ಸಭೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಮಧ್ಯೆ ಜ.15 ಹಾಗೂ 16ರಂದು ಎಲ್ಲಾ ಶಾಸಕರು, ಪರಾಜಿತ ಅಭ್ಯರ್ಥಿಗಳು ತಮ್ಮ ಕಾರ್ಯಕ್ರಮ ರದ್ದು ಮಾಡಿ ತಮ್ಮ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಗೆ ಪೂರ್ವಭಾವಿ ಸಭೆ ನಡೆಸಬೇಕು. ಈ ಸಭೆಯಲ್ಲಿ ಸಂಬಂಧಪಟ್ಟ ಎಲ್ಲಾ ಪದಾಧಿಕಾರಿಗಳು, ಉಸ್ತುವಾರಿ ಹಾಗೂ ವೀಕ್ಷಕರು ಭಾಗವಹಿಸಲಿದ್ದಾರೆ. ಕಿತ್ತೂರು ಕರ್ನಾಟಕ ಭಾಗದ ಮಂತ್ರಿಗಳು, ಶಾಸಕರು. ಪರಿಷತ್ ಸದಸ್ಯರು, ವಿವಿಧ ಸಮಿತಿಗಳ ಸದಸ್ಯರು ತಮ್ಮ ಜವಾಬ್ದಾರಿ ಮುಂದುವರಿಸಬೇಕಿದೆ ಎಂದು ಕರೆ ನೀಡಿದರು.

ಪ್ರಶ್ನೋತ್ತರ:

ಕಾರ್ಯಕ್ರಮಕ್ಕೆ ಕಡಿಮೆ ಸಮಯವಿದೆಯಲ್ಲವೇ ಎಂದು ಕೇಳಿದಾಗ, “ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜ.26ರಂದು ಮಧ್ಯಪ್ರದೇಶದಲ್ಲಿ ಕಾರ್ಯಕ್ರಮ ಮಾಡಲು ಅಂತಿಮಗೊಳಿಸಲಾಗಿದೆ. ಉಳಿದ ದಿನಗಳು ಬೇರೆ ಕಾರ್ಯಕ್ರಮಗಳನ್ನು ನಡೆಸಲು ಸೂಚನೆ ನೀಡಲಾಗಿದೆ. ಇನ್ನು 15 ದಿನಗಳ ಕಾಲಾವಕಾಶವಿದ್ದು, ಶಾಸಕರು, ಸಚಿವರು ಸೇರಿ ಸಿದ್ಧತೆ ಮಾಡಲಾಗುವುದು ಎಂದು ತಿಳಿಸಿದರು.

ಆ ಕಾರ್ಯಕ್ರಮಕ್ಕೆ ಅಮೆರಿಕ ಮಾಜಿ ಅಧ್ಯಕ್ಷ ಒಬಾಮಾ ಅವರು ಆಗಮಿಸುತ್ತಾರಾ ಎಂದು ಕೇಳಿದಾಗ, “ಗಾಂಧಿ ಭಾರತ ಕಾರ್ಯಕ್ರಮವನ್ನು ಇಡೀ ವರ್ಷ ಆಚರಣೆ ಮಾಡಲಾಗುವುದು. ಅವರನ್ನು ಪಕ್ಷದ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಆಗುವುದಿಲ್ಲ. ಸರ್ಕಾರಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ಈ ವಿಚಾರವಾಗಿ ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ. ಅವರ ಜತೆ ಚರ್ಚಿಸಿ ಮುಂದೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಶಾಸಕಾಂಗ ಪಕ್ಷದ ಸಭೆ ಕರೆದಿರುವುದೇಕೆ ಎಂದು ಕೇಳಿದಾಗ, ಗಾಂಧೀಜಿ ಅವರ ಮೌಲ್ಯಗಳನ್ನು ಉಳಿಸಲು, ಗಾಂಧಿ, ಅಂಬೇಡ್ಕರ್ ಅವರ ಮೌಲ್ಯಗಳು, ಸಂವಿಧಾನ ರಕ್ಷಣೆ ಮಾಡಬೇಕಲ್ಲವೇ. ನಮ್ಮ ಪಕ್ಷದ ಆಚಾರ ವಿಚಾರ ಪ್ರಚಾರ ಮಾಡಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನ ಜಾರಿಯಾದ ಕಾರಣ ನಾವು ಸಚಿವರಾಗಿದ್ದೇವೆ. ಮಾಧ್ಯಮಗಳಿಗೂ ಸ್ವಾತಂತ್ರ್ಯ ಸಿಕ್ಕಿದೆ. ಮುಂದಿನ ಪೀಳಿಗೆ ಯಾವ ದಿಕ್ಕಿನಲ್ಲಿ ಸಾಗಬೇಕು ಎಂದು ತಿಳಿಸಬೇಕಲ್ಲವೇ. ಹೀಗಾಗಿ ಸಭೆ ಮಾಡುತ್ತೇವೆ” ಎಂದರು.

21ರ ಕಾರ್ಯಕ್ರಮಕ್ಕೆ ಸೋನಿಯಾ ಗಾಂಧಿ ಭಾಗವಹಿಸುತ್ತಾರಾ ಎಂದು ಕೇಳಿದಾಗ, “ಈ ಕಾರ್ಯಕ್ರಮಕ್ಕೆ ಯಾರೆಲ್ಲಾ ಆಗಮಿಸಲಿದ್ದಾರೆ ಎಂದು ದೆಹಲಿಯಿಂದಲೇ ಪಟ್ಟಿ ರವಾನೆಯಾಗಲಿದೆ. ಅದು ಬಂದ ನಂತರ ಮಾಹಿತಿ ನೀಡಲಾಗುವುದು” ಎಂದು ತಿಳಿಸಿದರು.

ಪಕ್ಷದಲ್ಲಿನ ಬಿಕ್ಕಟ್ಟು ಶಮನಕ್ಕೆ ಸಿಎಲ್ ಪಿ ಸಭೆ ಮಾಡಲಾಗುವುದೇ ಎಂದು ಕೇಳಿದಾಗ, “ನಮ್ಮಲ್ಲಿ ಯಾರಿಗೂ ಬಿಕ್ಕಟ್ಟಿಲ್ಲ. ಬಿಕ್ಕಟ್ಟಿದ್ದರೆ ನಿಮ್ಮಲ್ಲೇ (ಮಾಧ್ಯಮದವರಿಗೆ) ಇರಬೇಕು. ನಮ್ಮಲ್ಲಿ ಬಿಕ್ಕಟ್ಟಿದೆ ಎಂದು ಹೇಳಿದವರು ಯಾರು?” ಎಂದರು.

ಅಧಿಕಾರ ಹಂಚಿಕೆ ಬಗ್ಗೆ ಬೇರೆ ಬೇರೆ ಹೇಳಿಕೆ ಕೇಳಿಬರುತ್ತಿವೆ ಎಂದು ಕೇಳಿದಾಗ, “ಯಾವ ಹೇಳಿಕೆಯೂ ಇಲ್ಲ. ಕಾಂಗ್ರೆಸ್ ಕಚೇರಿಯಲ್ಲಿ ನಾನು, ಸರ್ಕಾರದ ವಿಚಾರದಲ್ಲಿ ಸಿಎಂ ಅವರ ಹೇಳಿಕೆಯೇ ಅಂತಿಮ. ಬೇರೆ ಹೇಳಿಕೆಗಳಿಗೆ ಬೆಲೆ ಇರುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ಡಿನ್ನರ್ ಮೀಟಿಂಗ್ ರದ್ದು ಮಾಡಲು ದಲಿತ ವಿರೋಧಿಗಳೇ ಎಂಬ ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನನಗೆ ಆ ವಿಚಾರವಾಗಿ ಗೊತ್ತಿಲ್ಲ. ಅದನ್ನು ತಿಳಿದುಕೊಂಡು ನಿಧಾನವಾಗಿ ಉತ್ತರಿಸುತ್ತೇನೆ” ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯತ್ವಕ್ಕೆ ನಾಮನಿರ್ದೇಶನದ ಬಗ್ಗೆ ಕೇಳಿದಾಗ, “ಅದಕ್ಕೆ ಇನ್ನು ಸಮಯವಿದೆ. ಈ ವಿಚಾರವನ್ನು ಮುಖ್ಯಮಂತ್ರಿಗಳಿಗೆ ವಹಿಸಿದ್ದೇವೆ. ಖಾಲಿಯಾಗುವ ಎಲ್ಲಾ ಸ್ಥಾನಗಳಿಗೂ ಒಟ್ಟಿಗೆ ನಾಮನಿರ್ದೇಶನ ಮಾಡಲಾಗುವುದು. ಹೈಕಮಾಂಡ್ ನಾಯಕರ ಜತೆ ಚರ್ಚಿಸಿ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ” ಎಂದರು.

ಸರ್ಕಾರದ ಹಣ ವ್ಯರ್ಥ ಮಾಡುತ್ತಿದ್ದಾರೆ ಎಂಬ ಬಿಜೆಪಿ ಹಾಗೂ ಜೆಡಿಎಸ್ ಆರೋಪದ ಬಗ್ಗೆ ಕೇಳಿದಾಗ, “ಅವರು ಆರೋಪ ಮಾಡುತ್ತಿರಲಿ. ನಾವು ನಮ್ಮ ಸಿದ್ಧಾಂತ, ಆಚಾರ ವಿಚಾರವನ್ನು ಸರ್ಕಾರದ ಮೂಲಕ ಹೇಳುತ್ತೇವೆ. ಬಸವಣ್ಣ, ಕೆಂಪೇಗೌಡ, ಅಂಬೇಡ್ಕರ್, ಗಾಂಧೀಜಿ ಅವರ ಪ್ರತಿಮೆ ಮಾಡುತ್ತೇವೆ. ಈ ದೇಶದಲ್ಲಿ ಅತಿ ಹೆಚ್ಚು ಪ್ರತಿಮೆಗಳಿರುವುದು ಅಂಬೇಡ್ಕರ್ ಅವರದ್ದು, ಕೆಲವರು ಇದನ್ನು ಮರೆತಿದ್ದಾರೆ. ಮರೆತಿದ್ದನ್ನು ನೆನಪಿಸಬೇಕಲ್ಲವೇ. ವಿಧಾನಸೌಧದ ಮುಂದೆ ಇರುವ ಅಂಬೇಡ್ಕರ್ ಅವರ ಹಾಗೂ ಗಾಂಧೀಜಿ, ನೆಹರೂ ಅವರ ಪ್ರತಿಮೆ ಸರ್ಕಾರದ್ದಲ್ಲವೇ? ಮುಂದಿನ ದಿನಗಳಲ್ಲಿ ಮನಮೋಹನ್ ಸಿಂಗ್ ಅವರು ಕೊಟ್ಟ ಕಾರ್ಯಕ್ರಗಳ ಬಗ್ಗೆಯೂ ಪ್ರಚಾರ ಮಾಡಲು ನಾವು ರೂಪುರೇಷೆ ಸಿದ್ಧಪಡಿಸುತ್ತಿದ್ದೇವೆ” ಎಂದು ತಿಳಿಸಿದರು.

ಡಿ.ಕೆ. ಶಿವಕುಮಾರ್ ಅವರ ಸಹನೆಯ ಕಟ್ಟೆ ಒಡೆಯಲಿದೆ ಎಂಬ ಬೊಮ್ಮಾಯಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಮಾತನಾಡಲು ಪ್ರತ್ಯೇಕವಾಗಿ ಮತ್ತೊಂದು ಮಾಧ್ಯಮಗೋಷ್ಠಿ ನಡೆಸಿ ಉತ್ತರ ನೀಡುತ್ತೇನೆ. ಯಾರೆಲ್ಲಾ ಏನೇನು ಹೇಳಿದ್ದಾರೆ ಎಂದು ನೀವು ಪಟ್ಟಿ ಮಾಡಿಕೊಂಡಿರಿ, ಎಲ್ಲರಿಗೂ ಉತ್ತರ ನೀಡುತ್ತೇನೆ. ಅವರಿಗೆ ಹೊಸ ವರ್ಷದ ಸಂದರ್ಭದಲ್ಲಿ ಒಳ್ಳೆಯದಾಗಿಲಿ ಎಂದು ಶುಭಕೋರುತ್ತೇನೆ. ಅವರಿಗೆ ಸೂಜಿ ದಾರ ಕಳುಹಿಸಿಕೊಡುತ್ತೇನೆ. ಮೊದಲು ಅವರು ತಮ್ಮ ಒಡೆದ ಮನೆಯನ್ನು ಒಲಿದುಕೊಳ್ಳಲಿ ಎಂದರು.

ದೆಹಲಿಯಲ್ಲಿ ಗ್ಯಾರಂಟಿ ಯೋಜನೆ ಘೋಷಣೆ ಮಾಡಿರುವುದು ಯಶಸ್ವಿಯಾಗಲಿದೆಯೇ ಎಂದು ಕೇಳಿದಾಗ, “ನಾನು ಕಾಂಗ್ರೆಸ್ ಪಕ್ಷದ ನಾಯಕನಾಗಿ ಹಾಗೂ ಸದಸ್ಯನಾಗಿ ದೆಹಲಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ. ನೀಡುವ ಪ್ಯಾರಿ ದೀದಿ ಯೋಜನೆ ಘೋಷಣೆ ಮಾಡಲಾಗಿದೆ. ಪ್ರಿಯಾಂಕ ಗಾಂಧಿ ಅವರು ಇಲ್ಲಿಗೆ ಬಂದು ಹೇಗೆ ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದರೋ ಅದೇ ರೀತಿ ನಾನು ಅಲ್ಲಿ ಯೋಜನೆ ಘೋಷಿಸಿದ್ದೇನೆ. ಜನ ಬದಲಾವಣೆ ತಂದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ನಮಗಿದೆ. ಶೀಲಾ ದೀಕ್ಷಿತ್ ಅವರು ಅಲ್ಲಿ ಮೂರು ಅವಧಿಗೆ ಕಾಂಗ್ರೆಸ್ ಸರ್ಕಾರವನ್ನು ನಡೆಸಿದ್ದಾರೆ. ಪರಮೇಶ್ವರ್ ಅವರ ನೇತೃತ್ವದಲ್ಲಿ ನಾವು ಪ್ರಣಾಳಿಕೆ ರಚಿಸಿ ದೇಶಕ್ಕೆ ಮಾದರಿಯಾಗಿದ್ದೇವೆ. ನಾವು ಅಧಿಕಾರಕ್ಕೆ ಬಂದ ಮೊದಲ ದಿನವೇ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಅನುಮೋದನೆ ನೀಡಿ 3 ತಿಂಗಳಲ್ಲಿ ಜಾರಿ ಮಾಡಿದ್ದೇವೆ. 1.22 ಕೋಟಿ ಜನರಿಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ 2 ಸಾವಿರ ತಲುಪುತ್ತಿದೆ. 1.46 ಕೋಟಿ ಮನೆಗಳಿಗೆ ಗೃಹಜ್ಯೋತಿ ತಲುಪಿದೆ. ಅನ್ನಭಾಗ್ಯದಲ್ಲಿ 4 ಕೋಟಿಗೂ ಹೆಚ್ಚು ಫಲಾನುಭವಿಗಳಿದ್ದಾರೆ. ಶಕ್ತಿ ಯೋಜನೆಯಲ್ಲಿ 356 ಕೋಟಿ ಟ್ರಿಪ್ ಉಚಿತ ಪ್ರಯಾಣ ಮಾಡಲಾಗಿದೆ. ಈ ಯೋಜನೆಗಳಿಗೆ 56 ಸಾವಿರ ಕೋಟಿಯನ್ನು ಬಜೆಟ್ ನಲ್ಲಿ ಮೀಸಲಿಟ್ಟಿದ್ದೇವೆ. ನಮ್ಮದು ಅತ್ಯಂತ ಯಶಸ್ವಿ ಸರ್ಕಾರ. ಕೊಟ್ಟ ಮಾತಿನಂತೆ ನಡೆದಿದ್ದೇವೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ, ದೇಶದ ಇತಿಹಾಸ, ಕಾಂಗ್ರೆಸ್ ನುಡಿದಂತೆ ನಡೆಯುತ್ತದೆ. ಇದೇ ನಮ್ಮ ದೊಡ್ಡ ಶಕ್ತಿ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ