ಡಿಸೆಂಬರ್ ತಿಂಗಳು ಮುಗಿದಿದ್ದು, ಮುಖ್ಯ ಪರೀಕ್ಷೆಗೆ 3-4 ತಿಂಗಳು ಮಾತ್ರ ಬಾಕಿ ಇದೆ. ಇದರ ನಡುವೆ ಪೂರ್ವಸಿದ್ಧತಾ ಪರೀಕ್ಷೆ ಕೂಡ ನಡೆಸಬೇಕಿದೆ. ಹೀಗಾಗಿ, ಮಧ್ಯ ವಾರ್ಷಿಕ ಪರೀಕ್ಷೆ ನಡೆಸುತ್ತಾರೋ ಇಲ್ಲವೋ ಎಂಬ ಸ್ಪಷ್ಟತೆ ಇಲ್ಲದಂತಾಗಿದೆ.
ಕೆಲವು ಖಾಸಗಿ ಶಾಲೆಗಳು ಹಾಗೂ ಸರಕಾರಿ ಶಾಲೆಗಳ ಶಿಕ್ಷಕರು ಮಧ್ಯವಾರ್ಷಿಕ ಪರೀಕ್ಷೆ ನಡೆಸಬೇಕು. ಆದರೆ, ಈ ವರೆಗೆ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವೇಳಾಪಟ್ಟಿ ಪ್ರಕಟಿಸಿಲ್ಲ. ಅದನ್ನೇ ಎದುರು ನೋಡುತ್ತಿದ್ದೇವೆ ಎನ್ನುತ್ತಾರೆ. ಮತ್ತೆ ಕೆಲವು ಖಾಸಗಿ ಶಾಲೆಗಳು ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ(ಸಿಸಿಇ)ವನ್ನು ರಾಜ್ಯದ ಎಲ್ಲ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ನಡೆಸಲಾಗುತ್ತಿದೆ. ಶೈಕ್ಷಣಿಕ ವರ್ಷದ ದಸರಾ ರಜೆಗೂ ಮುನ್ನ ಮತ್ತು ಬಳಿಕ ಕ್ರಮವಾಗಿ ಎರಡು ರೂಪಣಾತ್ಮಕ ಮೌಲ್ಯಮಾಪನ ಮತ್ತು ಒಂದು ಸಂಕಲನಾತ್ಮಕ ಮೌಲ್ಯಮಾಪನ ನಡೆಸಲಾಗುತ್ತಿದೆ. ಮಧ್ಯವಾರ್ಷಿಕ ಪರೀಕ್ಷೆ ನಡೆಸುವುದಿಲ್ಲ ಎಂದು ಹೇಳಲಾಗಿದೆ.
ಕೇಂದ್ರ ಪಠ್ಯಕ್ರಮದ ಸಿಬಿಎಸ್‌ಇ ಮತ್ತು ಐಸಿಎಸ್‌ಇ ವಿದ್ಯಾರ್ಥಿಗಳಿಗೆ ಅರ್ಧವಾರ್ಷಿಕ ಪರೀಕ್ಷೆ ನಡೆಸಲಾಗಿದೆ. ಆದರೆ, ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಮಧ್ಯವಾರ್ಷಿಕ ಪರೀಕ್ಷೆ ನಡೆಸದಿರುವುದು ಗೊಂದಲ ಮೂಡಿಸಿದೆ ಹಾಗೂ ತಾರತಮ್ಯದಿಂದ ಕೂಡಿದೆ. ಒಂದು ವೇಳೆ ಒಮಿಕ್ರಾನ್ ಸೋಂಕು ತೀವ್ರಗೊಂಡು ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ನಿಲ್ಲಿಸಿದರೆ, ಈ ಹಿಂದಿನ ವರ್ಷದಂತೆಯೇ ಈ ವರ್ಷವೂ ಅವೈಜ್ಞಾನಿಕವಾಗಿ ಫಲಿತಾಂಶ ನೀಡಬೇಕಾಗುತ್ತದೆ ಎಂದು ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದ (ರುಪ್ಸಾ) ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಆತಂಕ ವ್ಯಕ್ತಪಡಿಸಿದ್ದಾರೆ.