ಬಿಜೆಪಿ ನಾಯಕರಿಗೆ ಸ್ವಾಭಿಮಾನವಿಲ್ಲವೇ?: ಎಚ್‌.ಡಿ.ಕುಮಾರಸ್ವಾಮಿ

ಶುಕ್ರವಾರ, 29 ಜುಲೈ 2016 (15:07 IST)
ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಎಲ್ಲಿಯವರೆಗೂ ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುತ್ತೀರಿ? ಯಾವ ಪುರುಷಾರ್ಥಕ್ಕೆ ಕೇಂದ್ರದಲ್ಲಿ ಮಂತ್ರಿಯಾಗಿದ್ದೀರಿ? ನಿಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬನ್ನಿ. ರಾಜ್ಯದ ಜನತೆಯ ಜೊತೆ ಚೆಲ್ಲಾಟವಾಡಬೇಡಿ. ಬಿಜೆಪಿ ನಾಯಕರಿಗೆ ಸ್ವಾಭಿಮಾನವಿಲ್ಲವೇ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ನೇರ ಸಂದೇಶ ರವಾನಿಸಿದ್ದಾರೆ.
 
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಸಂಸದರು ಪ್ರಧಾನಿ ಮೋದಿ ಅವರ ಬಳಿ ಗಟ್ಟಿಯಾಗಿ ಮಾತನಾಡಲು ಆಗುವುದಿಲ್ಲವೇ? ರಾಜ್ಯದಿಂದ ಆಯ್ಕೆಯಾಗಿರುವ 17 ಸಂಸದರು ರಾಜೀನಾಮೆ ನೀಡುತ್ತೇವೆ ಎಂದು ಹೇಳಿ. ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹೇಳುತ್ತಿಲ್ಲ. ಬದಲಾಗಿ ನಿಮ್ಮ ಮೇಲೆ ಹೊಣೆ ಇದೆ ಎಂದು ಸ್ಪಷ್ಟಪಡಿಸಿದರು.
 
ರಾಜ್ಯದ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರ ಮನವೊಲಿಕೆ ಮಾಡಬೇಕಾಗಿದೆ. ಮಹದಾಯಿ ಹೋರಾಟದಿಂದ ನಾವು ರಾಜ್ಯಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಈ ಕೂಡಲೇ ಪ್ರಧಾನಿ ಅವರು ಮಧ್ಯ ಪ್ರವೇಶಿಸಿ ನದಿ ನೀರು ಹಂಚಿಕೆ ಸಮಸ್ಯೆಯನ್ನು ಇತ್ಯರ್ಥಗೊಳಿಸಬೇಕು ಎಂದು ಒತ್ತಡ ಹೇರಿ ಎಂದು ಆಗ್ರಹಿಸಿದರು.
 
ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪಕ್ಷಗಳು ರಾಜ್ಯದ ಜನತೆಯ ಜೊತೆ ಚೆಲ್ಲಾಟವಾಡುತ್ತಿವೆ ಎಂದು ಆರೋಪಿಸಿದರು.
 
ಮಹದಾಯಿ ಹೋರಾಟಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತರನ್ನು ಬಂಧಿಸಬೇಡಿ, ಬೇಕಾದರೇ ನಮ್ಮಂತ ರಾಜಕಾರಣಿಗಳನ್ನು ಬಂಧಿಸಿ ಎಂದು ರೈತರ ಬಂಧನಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
 
ಈ ಕುರಿತಂತೆ ರಾಜಕೀಯ ಮಾಡಬಾರದು ಎಂದು ಸುಮ್ಮನಿದ್ದೇನೆ. ಈ ವರ್ತನೆ ಮುಂದುವರೆದರೆ ಬೀದಿಗಳಿದು ಹೋರಾಟ ನಡೆಸುತ್ತೇನೆ. ಮೈಸೂರಿನಲ್ಲಿ ನಡೆದ ಇಲವಾಲ್ ಕೇಸ್‌ನ್ನು ಇನ್ನೂ ಭೇದಿಸಿಲ್ಲ. ಆದರೆ, ರೈತರ ಪ್ರತಿಭಟನೆಯನ್ನು ಹತ್ತಿಕ್ಕುತ್ತಿದ್ದೀರಿ. ಹೋರಾಟದಲ್ಲಿ ರೈತರು ಬೆಂಕಿ ಹಚ್ಚಿಲ್ಲ. ಪ್ರಕರಣದಲ್ಲಿ ರಾಜ್ಯ ಸರಕಾರ ಅವರನ್ನು ಬಲಿಪಶು ಮಾಡುತ್ತಿದೆ ಎಂದು ಆರೋಪಿಸಿದರು.
 
ಹೋರಾಟದಲ್ಲಿ ಬಂಧನ ಮಾಡಿರುವ ರೈತರನ್ನು ಬಿಡುಗಡೆ ಮಾಡುವಂತೆ ರಾಜ್ಯ ಗೃಹ ಖಾತೆ ಸಚಿವ ಪರಮೇಶ್ವರ್ ಅವರೊಂದಿಗೆ ಮಾತನಾಡಿದ್ದೇನೆ. ಎರಡು ದಿನಗಳಲ್ಲಿ ಬಂಧಿತ ರೈತರನ್ನು ಬಿಡುಗಡೆಗೊಳಿಸುವಂತೆ ಡೆಡ್‌ಲೈನ್‌ ನೀಡಿದ್ದೇನೆ ಎಂದು ತಿಳಿಸಿದರು.
 
ರೈತರನ್ನು ಬಂಧಿಸದಂತೆ ಪೊಲೀಸರಲ್ಲಿ ಮನವಿ..
 
ಮಹದಾಯಿ ಹೋರಾಟಗಾರನ್ನು ಪೊಲೀಸರು ಮನೆಗೆ ನುಗ್ಗಿ ಬಂಧಿಸಿರುವುದಕ್ಕೆ ಸಂಬಂಧಿಸಿದಂತೆ ನೀವು ಹೋರಾಟಕ್ಕೆ ಮುಂದಾದಾಗ ಸಾರ್ವಜನಿಕರು ನಿಮಗೆ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ, ಈಗ ನೀವು ಸರಕಾರವನ್ನು ಮೆಚ್ಚಿಸಲು ಅನಾಗರಿಕರಂತೆ ವರ್ತಿಸುತ್ತಿದ್ದೀರಿ. ಜಮ್ಮು ಕಾಶ್ಮೀರದಲ್ಲಿಯೂ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಅಲ್ಲಿಯ ಅಧಿಕಾರಿಗಳು ಸಂಯಮದಿಂದ ವರ್ತಿಸುತ್ತಿದ್ದಾರೆ. ಹೋರಾಟಗಾರರಿಗೆ ತೊಂದರೆ ಕೊಡಬೇಡಿ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಪೊಲೀಸರಲ್ಲಿ ಮನವಿ ಮಾಡಿಕೊಂಡರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ