ಠಾಣೆ: ಅತಿಯಾದ ಮೊಬೈಲ್ ಬಳಕೆಗೆ ಮನೆಯವರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ 20 ವರ್ಷದ ಯುವತಿಯೊಬ್ಬಳು 11ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ಠಾಣೆಯಲ್ಲಿ ನಡೆದಿದೆ.
ಯುವತಿಯನ್ನು ಸಮೀಕ್ಷಾ ನಾರಾಯಣ ವಡ್ಡಿ ಎಂದು ಗುರುತಿಸಲಾಗಿದೆ.11ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾತ್ರಿ ವೇಳೆ ಯುವತಿ ಅತಿಯಾಗಿ ಮೊಬೈಲ್ ಬಳಸುವುದನ್ನು ನೋಡಿ ಪೊಷಕರು ಆಕ್ಷೇಪ ವ್ಯಕ್ತಪಡಿಸಿ, ಮೊಬೈಲ್ ಬಳಕೆಯನ್ನು ತಗ್ಗಿಸುವಂತೆ ಸಲಹೆ ನೀಡಿದ್ದರು. ಇದಕ್ಕೆ ನಿರಾಕರಿಸಿದ ಯುವತಿಯಿಂದ ಮೊಬೈಲ್ ಕಸಿದುಕೊಳ್ಳಲಾಗಿತ್ತು ಎಂದು ಮನಪಾಡ ಪೊಲೀಸರು ತಿಳಿಸಿದ್ದಾರೆ.
ಇದರಿಂದ ತೀವ್ರವಾಗಿ ನೊಂದ ಯುವತಿ, ವಸತಿ ಸಮುಚ್ಚಯದ 11ನೇ ಮಹಡಿಯಲ್ಲಿರುವ ತಮ್ಮ ಮನೆಯ ಬಾಲ್ಕನಿಯಿಂದ ಹಾರಿದ್ದಾರೆ. ತಕ್ಷಣ ಇವರನ್ನು ಆಸ್ಪತ್ರೆಗೆ ಕರೆತರಲಾಯಿತಾದರೂ, ಆ ಹೊತ್ತಿಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ವಿವರಿಸಿದ್ದಾರೆ.
ಎಲ್ಲಾ ಆಯಾಮಗಳಿಂದ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಆತ್ಮಹತ್ಯೆಯೇ ಎಂದು ತೀರ್ಮಾನಕ್ಕೆ ಬರಲು ವಿಚಾರಣೆ ತೀವ್ರಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.