ನವದೆಹಲಿ: ಶೀಘ್ರದಲ್ಲಿ ನಡೆಯಲಿರುವ ಜನಗಣತಿಯೊಂದಿಗೆ ಜಾತಿ ಗಣತಿ ಸಮೀಕ್ಷೆಯನ್ನೂ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ.
ಜಾತಿ ಸಮೀಕ್ಷೆಯನ್ನು ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷಗಳು ಬಳಸಿಕೊಳ್ಳುತ್ತಿವೆ ಎಂದು ಆರೋಪಿಸುತ್ತಿದ್ದ ಕೇಂದ್ರ ಸರ್ಕಾರ, ಇದೀಗ ಜಾತಿಗಣತಿಯನ್ನು ಜನಗಣತಿಯ ಭಾಗವಾಗಿಸುವುದಾಗಿ ಹೇಳಿದೆ. ಸದಾ ಜಾತಿಗಣತಿ ಜಪ ಮಾಡುತ್ತಿದ್ದ ಕಾಂಗ್ರೆಸ್‌ಗೆ ಈ ಮೂಲಕ ಸರ್ಕಾರ ಟಾಂಗ್ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯು ಮುಂಬರುವ ಜನಗಣತಿಯಲ್ಲಿ ಜಾತಿ ಎಣಿಕೆಯನ್ನು ಸೇರಿಸಲು ನಿರ್ಧರಿಸಿದೆ ಎಂದು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಜನಗಣತಿ ಕಾರ್ಯ ಏಪ್ರಿಲ್ 2020 ರಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ವಿಳಂಬವಾಯಿತು. 10 ವರ್ಷಗಳ ವೇಳಾಪಟ್ಟಿಯ ಪ್ರಕಾರ ಈ ಕಾರ್ಯ ನಡೆದಿದ್ದರೆ, ವರದಿಯು 2021 ರಲ್ಲಿ ಪ್ರಕಟವಾಗುತ್ತಿತ್ತು.