ರಾಜ್ಯ ಡಿಜಿಪಿ ಅಲೋಕ್ ಮೋಹನ್ ನಿವೃತ್ತಿ: ಕನ್ನಡಿಗ ಎಂ.ಎ. ಸಲೀಂಗೆ ಒಲಿದ ಮಹತ್ವದ ಹುದ್ದೆ

Sampriya

ಬುಧವಾರ, 21 ಮೇ 2025 (19:27 IST)
Photo Courtesy X
ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಅಲೋಕ್ ಮೋಹನ್ ಇಂದು ನಿವೃತ್ತಿಯಾಗಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಕನ್ನಡಿಗ  ಎಂ.ಎ. ಸಲೀಂ ಪ್ರಭಾರವಾಗಿ ನೇಮಕಗೊಂಡಿದ್ದಾರೆ.

ಹಿರಿಯ ಐಪಿಎಸ್ ಅಧಿಕಾರಿ ಎಂ.ಎ. ಸಲೀಂ ಅವರನ್ನು ರಾಜ್ಯದ ಪ್ರಭಾರ ಪೊಲೀಸ್ ಮಹಾನಿರ್ದೇಶಕರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರವು ಬುಧವಾರ ಆದೇಶಿಸಿದೆ. ಬೆಂಗಳೂರಿನ ಚಿಕ್ಕಬಾಣಾವರದ ಕನ್ನಡಿಗ ಎಂ.ಎ. ಸಲೀಂ ಅವರು 1993ನೇ ಸಾಲಿನ ಕರ್ನಾಟಕ ಕೇಡರ್ ಅಧಿಕಾರಿಯಾಗಿದ್ದಾರೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಅಲೋಕ್ ಮೋಹನ್ ಅವರು ಏ. 30ರಂದು ನಿವೃತ್ತಿಯಾದರು. ಆದರೆ ಮೇ 21ರವರೆಗೆ ಅವರ ಕರ್ತವ್ಯ ಅವಧಿಯನ್ನು ರಾಜ್ಯ ಸರ್ಕಾರ ವಿಸ್ತರಿಸಿತ್ತು. 2023ರ ಮೇ 22ರಂದು ಅಲೋಕ್ ಮೋಹನ್ ಅಧಿಕಾರ ಸ್ವೀಕರಿಸಿದ್ದರು. ಆರಂಭದ ಮೂರು ತಿಂಗಳು ಪ್ರಭಾರ ಡಿಜಿಪಿಯಾಗಿದ್ದ ಅವರನ್ನು, ಬಳಿಕ ಅವರನ್ನು ಪೂರ್ಣ ಪ್ರಮಾಣದ ಡಿಜಿಪಿಯಾಗಿ ಸರ್ಕಾರ ನೇಮಿಸಿತ್ತು.

ಪ್ರಸ್ತುತ ಸೇವಾ ಹಿರಿತನದಲ್ಲಿ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಬಿಹಾರ ಮೂಲದ ಪ್ರಶಾಂತ್ ಕುಮಾರ್ ಠಾಕೂರ್‌, ಸಿಐಡಿ ಡಿಜಿಪಿ ಡಾ.ಎ.ಎಂ.ಸಲೀಂ ಮತ್ತು ಕೆ.ರಾಮಚಂದ್ರ ರಾವ್ ಹೆಸರು ಪಟ್ಟಿಯಲ್ಲಿದೆ.

ಇದರಲ್ಲಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ರಾಮಚಂದ್ರ ರಾವ್‌ಗೆ ಸರ್ಕಾರ ಕಡ್ಡಾಯ ರಜೆ ಮೇಲೆ ಕಳುಹಿಸಿದೆ. ಆದ್ದರಿಂದ ಪ್ರಶಾಂತ್ ಕುಮಾರ್ ಠಾಕೂರ್ ಹಾಗೂ ಸಲೀಂ ಹೆಸರು ಮುಂಚೂಣಿಯಲ್ಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ