ಬೆಂಗಳೂರು:ರಾಜ್ಯ ಸರ್ಕಾರಿ ಸಚಿವಾಲಯದ ಒಳಾಡಳಿತ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸುಮಾರು 50 ಕ್ಕೂ ಹೆಚ್ಚು ಮಂದಿಯಿಂದ 1.61 ಕೋಟಿ ರೂಪಾಯಿ ಪಡೆದು ನಕಲಿ ಆದೇಶ ಪತ್ರಗಳನ್ನು ನೀಡಿ ವಂಚಿಸಿದ್ದ ಇಬ್ಬರು ಸರ್ಕಾರಿ ನೌಕರರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸರ್ಕಾರದ ಒಳಾಡಳಿತ ಇಲಾಖೆಯಲ್ಲಿ ಕಡತ ನಿರ್ವಾಹಕರಾದ ಶ್ರೀಲೇಖಾ ಮತ್ತು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಮೋಹನ್ ಅಲಿಯಾಸ್ ಸಂಪತ್ ಕುಮಾರ್ ರನ್ನು ಬುಧವಾರ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಮೊತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ಆಕೆಯ ಪತ್ತೆಗೆ ಬಲೆ ಬೀಸಿದ್ದಾರೆ.
2019ನೆ ಸಾಲಿನ ಮಾರ್ಚ್‌ನಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗದ ಉಪಾಧ್ಯಕ್ಷರೆಂದು ಪರಿಚಯಿಸಿಕೊಂಡ ರಾಧಾ ಉಮೇಶ್ ಎನ್ನುವವರು ತಮಗೆ ಕಾರ್ಮಿಕರಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿಕೊಡುತ್ತೇನೆ ಎಂದು ಹೇಳುತ್ತಿದ್ದಾಗ ಗಮನಿಸಿದ ಮಂಜುನಾಥ್ ಎನ್ನುವವರು ತಮಗೆ ಯಾವುದೇ ಉದ್ಯೋಗವಿಲ್ಲದ ಕಾರಣ ಸಚಿವಾಲಯದಲ್ಲಿ ದಿನಗೂಲಿ ನೌಕರರ ಕೆಲಸಕೊಡಿ ಎಂದು ಕೇಳಿದ್ದರು.
ಏಜೆನ್ಸಿ ಕೊಡಿಸಲು ತುಂಬಾ ಹಣ ಖರ್ಚಾಗುತ್ತದೆ ಎಂದು ಹೇಳಿ ಮಂಜುನಾಥ್ ರಿಂದ 4 ಕಂತುಗಳಲ್ಲಿ 15 ಲಕ್ಷ ರೂ.ಗಳನ್ನು ಪಡೆದುಕೊಂಡಿದ್ದರು. ನಂತರ ಈ ಬಗ್ಗೆ ಮಂಜುನಾಥ್ ಕೇಳಿದಾಗ, ತಮಗೆ ಸರ್ಕಾರಿ ಓಡಾಳಿತ ಇಲಾಖೆಯಲ್ಲಿ ಕಡತ ನಿರ್ವಾಹಕರಾಗಿರುವ ಶ್ರೀಲೇಖಾ ಎಂಬುವವರ ಪರಿಚಯವಿದೆ, ಅವರು ನಿಮ್ಮ ಏಜೆನ್ಸಿ ಕೆಲಸ ಮಾಡಿಕೊಡುತ್ತಾರೆ ಎಂದು ಪರಿಚಯ ಮಾಡಿಕೊಟ್ಟಿದ್ದಳು.
ನಂತರ ಇಬ್ಬರೂ ಒಳಾಡಳಿತ ಇಲಾಖೆಯಲ್ಲಿ ನೇರ ನೇಮಕಾತಿ ಮೂಲಕ ಸಹಾಯಕರು, ಹಿರಿಯ ಸಹಾಯಕರು ಮತ್ತು ಅಧೀಕ್ಷಕರ ಹುದ್ದೆಗಳ ನೇಮಕಾತಿಗಳನ್ನು ನಿಮಗೆ ಪರಿಚಯವಿರುವವರಿಗೆ ಮಾಡಿಸಿಕೊಡುತ್ತೇನೆ ಎಂದು ನಂಬಿಸಿದ್ದರು. ಅವರ ಮಾತನ್ನು ನಂಬಿದ ಮಂಜುನಾಥ್ ಸಂಬಂಧಿಕರು ಮತ್ತು ಸ್ನೇಹಿತರು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರಿ ಉದ್ಯೋಗ ಕೊಡಿಸಬಹುದು ಎಂದು ನಂಬಿಕೊಂಡು ಸುಮಾರು 55 ಮಂದಿಯನ್ನು ಸಂಪರ್ಕಿಸಿ ಶ್ರೀಲೇಖಾ ರ ವಿಚಾರ ತಿಳಿಸಿದ್ದರು.
ಸರ್ಕಾರಿ ಉದ್ಯೋಗ ಸಿಗುತ್ತದೆ ಎಂದು ನಂಬಿ ಕಳೆದ ಆಗಸ್ಟ್ 15 ರಿಂದ ಸೆಪ್ಟೆಂಬರ್ 20ರವರೆಗೆ 76.54 ಲಕ್ಷ ರೂ.ಗಳನ್ನು ಮಂಜುನಾಥ್ ಬ್ಯಾಂಕ್ ಖಾತೆಯಿಂದ ಗೂಗಲ್ ಪೇ, ಫೋನ್ ಪೇ. ಎನ್.ಇ.ಎಫ್.ಟಿ ಮೂಲಕ ಶ್ರೀಲೇಖಾಳ ಎಸ್‌ಬಿಐ ಬ್ಯಾಂಕ್ ಖಾತೆ ಹಾಗೂ ಅಲಹಾಬಾದ್ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದರು. ಹಾಗೆಯೇ 50 ರಿಂದ 40 ಲಕ್ಷ ರೂಗಳನ್ನು ನಗದು ರೂಪದಲ್ಲಿ ಕೊಟ್ಟಿದ್ದರು.
ನಂತರ ಅಭ್ಯರ್ಥಿಗಳಿಗೆ ಕೊಡುವಂತೆ ನೇಮಕಾತಿ ಆದೇಶಗಳನ್ನು ವಿಕಾಸಸೌಧದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಮೋಹನ್ ಅಲಿಯಾಸ್ ಸಂಪತ್ ಕುಮಾರ್ ಮಂಜುನಾಥ್ ರಿಗೆ ತಂದುಕೊಟ್ಟಿದ್ದರು ಹಾಗೂ ಅಭ್ಯರ್ಥಿಗಳನ್ನು ವಿಕಾಸಸೌಧದ ಒಳಗೆ ಯಾವುದೋ ಕಚೇರಿಗೆ ಕರೆದುಕೊಂಡು ಹೋಗಿ ನಂತರ ಅವರ ಮೂಲ ದಾಖಲಾತಿಯನ್ನು ಪಡೆದುಕೊಂಡು ಪರಿಶೀಲನೆ ಮಾಡಿದ ಹಾಗೆ ಮಾಡಿ, ನಂತರ ತರಬೇತಿಗೆ ಹಾಜರಾಗುವಂತೆ ಒಂದು ಪತ್ರವನ್ನು ಕೊಟ್ಟು ಕಳುಹಿಸಿದ್ದರು.
ಈ ಕೆಲಸಕ್ಕಾಗಿ ಸಂಪತ್‌ಕುಮಾರ್‌ಗೆ 22.75 ಲಕ್ಷ ರೂ. ನಗದು ರೂಪದಲ್ಲಿ ಮತ್ತು ಮೊಬೈಲ್‌ಗೆ ಗೂಗಲ್ ಪೇ ಹಾಗೂ ಪೋನ್ ಪೇ ಮೂಲಕ 5.90 ಲಕ್ಷ ರೂ.ಗಳನ್ನು ಮಂಜುನಾಥ್ ವರ್ಗಾವಣೆ ಮಾಡಿದ್ದರು. ಸೆಪ್ಟೆಂಬರ್ 24 ರಂದು ರಾಕೇಶ್ ಎಂಬ ಅಭ್ಯರ್ಥಿ ಸಂಪತ್ ಕುಮಾರ್ ನೀಡಿದ್ದ ಆದೇಶ ಪತ್ರವನ್ನು ತೆಗೆದುಕೊಂಡು ವಿಧಾನಸೌಧದ ಆರ್ಥಿಕ ಇಲಾಖೆಗೆ ಹೋಗಿ ವಿಚಾರಿಸಿದ್ದರು. ಆಗ ಅಲ್ಲಿನ ಸಿಬ್ಬಂದಿ ಆದೇಶ ಪತ್ರವನ್ನು ಪರಿಶೀಲಿಸಿ ಈ ರೀತಿ ಯಾವುದೇ ನೇಮಕಾತಿಗಳನ್ನು ಇಲಾಖೆಯಲ್ಲಿ ಮಾಡುತ್ತಿಲ್ಲವೆಂದು ತಿಳಿಸಿ ಇದೊಂದು ನಕಲಿ ಆದೇಶ ಪತ್ರವೆಂದು ಹೇಳಿದ್ದರು. ತಕ್ಷಣ ರಾಕೇಶ್ ಮಂಜುನಾಥ್ ರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದರು. ಶ್ರೀಲೇಖಾ ಮತ್ತು ಸಂಪತ್ ಕುಮಾರ್ ನೀಡಿದ್ದ ನೇಮಕಾತಿ ಆದೇಶ ಪತ್ರಗಳನ್ನು ತಮಗೆ ಪರಿಚಯವಿದ್ದವರಿಗೆ ಕೊಟ್ಟು ವಿಚಾರಿಸಿದಾಗ ಇವು ನಕಲಿ ನೇಮಕಾತಿ ಪತ್ರವೆಂದು ತಿಳಿದು ತಕ್ಷಣ ಮಂಜುನಾಥ್ ವಿಧಾನಸೌಧ
ಪೊಲೀಸ್ ಠಾಣೆಗೆ ತೆರಳಿ ವಿಷಯ ತಿಳಿಸಿದ್ದರು
ನಂತರ ಸರ್ಕಾರಿ ಉದ್ಯೋಗದ ಆಮಿಷವೊಡ್ಡಿ ನನ್ನ ಸಂಬಂಧಿಕರು ಹಾಗೂ ಸ್ನೇಹಿತರನ್ನು ನಂಬಿಸಿ ಒಟ್ಟು 1.61 ಕೋಟಿ ರೂ.ಗಳನ್ನು ಪಡೆದುಕೊಂಡು ನಕಲಿ ನೇಮಕಾತಿ ಆದೇಶ ಪತ್ರಗಳನ್ನು ಕೊಟ್ಟು ಮೊಸ ಮಾಡಿರುವ ಶ್ರೀಲೇಖಾ ಮತ್ತು ಸಂಪತ್ ಕುಮಾರ್ ಹಾಗೂ ಏಜೆನ್ಸಿ ಕೊಡಿಸುವುದಾಗಿ 15 ಲಕ್ಷ ರೂ.ಗಳನ್ನು ಪಡೆದುಕೊಂಡು ವಂಚಿಸಿರುವ ರಾಧಾ ಉಮೇಶ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಇಂದು ಇಬ್ಬರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿ ತನಿಖೆ ನೆಡೆಸುತ್ತಿದ್ದೇವೆ. ಆರೋಪಿ ರಾಧಾ ಉಮೇಶ್ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.