ಸ್ಟೀಲ್ ಬ್ರಿಡ್ಜ್ ಸಿಎಂ ಸಿದ್ದರಾಮಯ್ಯ, ಜಾರ್ಜ್ ಅಪವಿತ್ರ ಮೈತ್ರಿ ಫಲ: ಪ್ರತಾಪ್ ಸಿಂಹ್

ಗುರುವಾರ, 27 ಅಕ್ಟೋಬರ್ 2016 (14:49 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಜೆ.ಜಾರ್ಜ್ ಅಪವಿತ್ರ ಮೈತ್ರಿಯ ಫಲವೇ ಸ್ಟೀಲ್ ಬ್ರಿಡ್ಜ್ ಎಂದು ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ.
 
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರಿಗಾಗಿ ಜನತೆ ಹತಾಶರಾಗಿದ್ದಾರೆ. ಕಾವೇರಿ ನದಿ ಉಳಿಸಲು ರಾಜ್ಯ ಸರಕಾರ ಯೋಜನೆ ಮಾಡುತ್ತಿಲ್ಲ. ಸಿಎಂ ಸಿದ್ದರಾಮಯ್ಯರಿಗೆ ಹಣದ ಹೊಳೆಯೇ ಅಗತ್ಯವಾಗಿದೆ. ಹೀಗಾಗಿ ಕೆ.ಜೆ.ಜಾರ್ಜ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಹಣದ ಹೊಳೆಗಾಗಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲು ರಾಜ್ಯ ಸರಕಾರ ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದರು.
 
ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಸಾರ್ವಜನಿಕರು ವಿರೋಧಿಸುತ್ತಿದ್ದಾರೆ. ಬಿಜೆಪಿಯಲ್ಲ. ಸರಕಾರ ಕೇವಲ ಭರವಸೆ ನೀಡುತ್ತದೆ ಅಷ್ಟೇ. ಆದರೆ, ಯಾರ ಮಾತನ್ನು ಕೇಳಿಸಿಕೊಳ್ಳುವುದಿಲ್ಲ ಎಂದು ವ್ಯಂಗ್ಯವಾಡಿದರು.  
 
ಬಿಎಸ್‌ವೈ ಮುಂದಿನ ಸಿಎಂ......
 
ಕಿಕ್ ಬ್ಯಾಕ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖುಲಾಸೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಂಸದ ಪ್ರತಾಪ್ ಸಿಂಹ, ಸಿಬಿಐ ನೀಡಿರುವ ತೀರ್ಪು ಬಿಎಸ್‌ವೈ ರಾಜಕೀಯ ವಿರೋಧಿಗಳಿಗೆ ತಕ್ಕ ಪಾಠ ಎಂದು ಟಾಂಗ್ ನೀಡಿದರು.
 
ಬಿಎಸ್‌ವೈ ಜನಪ್ರಿಯ ಮುಖ್ಯಮಂತ್ರಿಯಾಗಿದ್ದರು. ಅವರ ಯಶಸ್ವಿ ಸಹಿಸಲಾಗದ ರಾಜಕೀಯ ವಿರೋಧಿಗಳು ಕುತಂತ್ರ ನಡೆಸಿದ್ದರು. ವಾಮಾಮಾರ್ಗದ ಮೂಲಕ ಅವರನ್ನು ಕುಗ್ಗಿಸಲು ಯತ್ನಿಸಿದರು. ಆದರೆ, ಹಾಗಾಗಲಿಲ್ಲ ಸತ್ಯಕ್ಕೆ ಜಯ ಸಿಕ್ಕಿದೆ. ಮುಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಎಂದು ಪ್ರತಾಪ್ ಸಿಂಹ ಭವಿಷ್ಯ ನುಡಿದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ