ಬಿಜೆಪಿ ಅವಧಿಯಲ್ಲಿಯೇ ಸ್ಟೀಲ್ ಬ್ರಿಡ್ಜ್ ಯೋಜನೆ ಪ್ರಸ್ತಾಪ: ಜಾರ್ಜ್ ತಿರುಗೇಟು

ಮಂಗಳವಾರ, 25 ಅಕ್ಟೋಬರ್ 2016 (16:38 IST)
ಸ್ಟೀಲ್ ಬ್ರಿಡ್ಜ್ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಆರೋಪಿಸಿದ್ದಾರೆ.
 
ಸ್ಟೀಲ್ ಬ್ರಿಡ್ಜ್ ನಿರ್ಮಾಣ ಕುರಿತು ವಿಧಾನಸೌಧದಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ಬ್ರಿಡ್ಜ್ ಕುರಿತು ಮಾಹಿತಿ ನೀಡಿದ್ದೇವೆ. ಬಿಜೆಪಿ ಅವಧಿಯಲ್ಲಿ ಸ್ಟೀಲ್ ಬ್ರಿಡ್ಜ್ ಯೋಜನೆ ಪ್ರಸ್ತಾಪವಾಗಿದೆ. ಆದರೆ, ಇದೀಗ ಅವರೇ ವಿರೋಧ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.  
 
ಬ್ರಿಡ್ಜ್ ನಿರ್ಮಾಣ ವಿಚಾರದಲ್ಲಿ ಟೋಲ್ ಹಾಕುವ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆಸಿದ್ದು ನಿಜ. ಟೋಲ್ ವಿಧಿಸುವ ಕುರಿತು ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಆದರೆ, ಕೇವಲ ಸ್ಟೀಲ್ ಬ್ರಿಡ್ಜ್‌ಗೆ ಮಾತ್ರವಲ್ಲ, ಒಟ್ಟಾರೆ ಎಲಿವೇಟೆಡ್ ಕಾರಿಡಾರ್‌ಗೆ ಟೋಲ್ ಹಾಕಲು ನಿರ್ಧರಿಸಲಾಗಿತ್ತು. ಸದ್ಯ ಇದೀಗ ಸ್ಟೀಲ್ ಬ್ರಿಡ್ಜ್‌ಗೆ ಟೋಲ್ ಹಾಕುವುದಿಲ್ಲ ಎಂದರು. 
 
ಸ್ಟೀಲ್ ಬ್ರಿಡ್ಜ್ ಎಲಿವೇಟೆಡ್ ಕಾರಿಡಾರ್‌ನ ಒಂದು ಭಾಗವಷ್ಟೇ. ಎಲಿವೇಟೆಡ್ ಕಾರಿಡಾರ್ ಸಂಪೂರ್ಣಗೊಂಡ ಮೇಲೆ ಬ್ರಿಡ್ಜ್‌ಗೂ ಸೇರಿಸಿ ಟೋಲ್ ಹಾಕುತ್ತೇವೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ