ರ‍್ಯಾಪಿಡೋ, ಪೋರ್ಟರ್ ಸೇವೆಯಿಂದ ಆಟೋ ಚಾಲಕರಿಗೆ ಆಗುತ್ತಿರುವ ತೊಂದರೆಯನ್ನು ಖಂಡಿಸಿ, ಬೆಂಗಳೂರಿನ ಮೌರ್ಯ ವೃತ್ತದಲ್ಲಿ, ಆಮ್ ಆದ್ಮಿ ಪಾರ್ಟಿಯ ಆಟೋ ಚಾಲಕರ ಘಟಕದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ಎಎಪಿ ಆಟೋ ಚಾಲಕರ ಘಟಕದ ರಾಜ್ಯ ಅಧ್ಯಕ್ಷರಾದ ಆಯೂಬ್ ಖಾನ್, ಲಾಕ್‌ಡೌನ್ ಹಾಗೂ ಕರ್ಫ್ಯೂಗಳಿಂದ ಆಟೋ ಚಾಲಕರು ಕಳೆದ ಎರಡು ವರ್ಷಗಳಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಪರದಾಡುವಂತಾಗಿದೆ.ಈಗ ರ‍್ಯಾಪಿಡೋ ಬೈಕ್‌ಗಳು ಕಾನೂನುಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವುದು ಆಟೋ ಚಾಲಕರಿಗೆ ಶಾಪವಾಗಿದೆ. ಸರ್ಕಾರದಿಂದ ಪರವಾನಗಿ ಪಡೆಯದೇ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವ ರ‍್ಯಾಪಿಡೋ ಸೇವೆಗೆ ಕಡಿವಾಣ ಹಾಕಬೇಕು. ಗೂಡ್ಸ್ ಆಟೋಗಳಿಗೆ ತೊಂದರೆ ನೀಡುತ್ತಿರುವ ಪೋರ್ಟರ್ ಕಂಪನಿಯ ಸೇವೆಗೆ ನಿಯಂತ್ರಣ ಹೇರಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಹರೀಶ್, ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಹಾಗೂ ನೂರಾರು ಆಟೋ ಚಾಲಕರು ಭಾಗವಹಿಸಿದ್ದರು.