ಫೆ.29 ಮೇಕೆದಾಟು ಪಾದಯಾತ್ರೆ ಪ್ರಾರಂಭ

ಗುರುವಾರ, 17 ಫೆಬ್ರವರಿ 2022 (15:06 IST)
ಕೋವಿಡ್ ಹಿನ್ನೆಲೆಯಲ್ಲಿ ಮೊಟಕುಗೊಳಿಸಿದ್ದ 'ನಮ್ಮ ನೀರು ನಮ್ಮ ಹಕ್ಕು' ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೆ ಆಗ್ರಹಿಸಿ 'ಕಾಂಗ್ರೆಸ್ ಪಾದಯಾತ್ರೆ' ಫೆ.27ರಿಂದ ರಾಮನಗರದಿಂದ ಪುನರ್ ಆರಂಭ ಮಾಡಲಾಗುವುದು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ವಿಧಾನಸಭೆ ಮೊಗಸಾಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ಬಜೆಟ್ ಅಧಿವೇಶನ ಆರಂಭವಾಗುವುದರೊಳಗೆ ಮೇಕೆದಾಟು ಪಾದಯಾತ್ರೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಬೆಂಗಳೂರು ನಗರದಲ್ಲಿ ಈ ಹಿಂದೆ ಉದ್ದೇಶಿಸಿದ್ದ ಮಾರ್ಗದಲ್ಲಿ ಕೆಲ ಮಾರ್ಪಾಡು ಮಾಡಲಾಗುವುದು' ಎಂದು ತಿಳಿಸಿದರು.
 
ಜ.9ರಿಂದ ಕನಕಪುರ ಜಿಲ್ಲೆಯ ಸಾತನೂರು ಸಮೀಪದ ಸಂಗಮದಿಂದ ಮೇಕೆದಾಟು ಪಾದಯಾತ್ರೆ ಆರಂಭಿಸಲಾಗಿತ್ತು. ಅಲ್ಲಿಂದ ದೊಡ್ಡ ಆಲಹಳ್ಳಿ, ಕನಕಪುರ, ಕೆ.ಪಿ.ದೊಡ್ಡಿ ಮೂಲಕ ಜ.13ಕ್ಕೆ ರಾಮನಗರ ತಲುಪಿತ್ತು. ಈ ವೇಳೆಗೆ ರಾಜ್ಯದಲ್ಲಿ ಕೋವಿಡ್ ಸೋಂಕಿನ ಮೂರನೇ ಅಲೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಹೀಗಾಗಿ ಜ.14ರಂದು ಪಾದಯಾತ್ರೆ ಮಾರ್ಗಮಧ್ಯೆ ಸ್ಥಗಿತಗೊಳಿಸಲಾಗಿತ್ತು.
 
ಇದೀಗ ಕೋವಿಡ್ ಸೋಂಕು ಇಳಿಕೆಯಾಗಿದ್ದು, ಪಾದಯಾತ್ರೆ ಪುನರ್ ಆರಂಭ ಮಾಡಲು ಕಾಂಗ್ರೆಸ್ ಉದ್ದೇಶಿಸಿದೆ. ಇದೀಗ ರಾಮನಗರದಿಂದ ಬೆಂಗಳೂರಿನ ವರೆಗೂ ಉಳಿದ 6 ದಿನಗಳ ಪಾದಯಾತ್ರೆ ಮುಂದುವರೆಯಲಿದೆ. ಈ ಸಂಬಂಧ ಪಕ್ಷದಲ್ಲಿ ಸಮಾಲೋಚನೆ ನಡೆಸಿದ್ದು, ಬೆಂಗಳೂರು ನಗರದ ಪಕ್ಷದ ಎಲ್ಲ ಶಾಸಕರು ಹಾಗೂ ಮುಖಂಡರೊಂದಿಗೆ ಚರ್ಚಿಸಿ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ಶಿವಕುಮಾರ್ ತಿಳಿಸಿದರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ