ಮಂಡ್ಯ: ಮಂಡ್ಯಲೋಕಸಭೆ ಚುನಾವಣೆ ಕಣ ಪ್ರತೀ ಬಾರಿಯೂ ರಂಗೇರುತ್ತದೆ. ಈ ಬಾರಿಯೂ ಇದು ಮುಂದುವರಿದಿದೆ. ಬಿಜೆಪಿ ಅಭ್ಯರ್ಥಿ ಸುಮಲತಾ ಮತ್ತು ಜೆಡಿಎಸ್ ನಡುವೆ ಮಂಡ್ಯ ಕ್ಷೇತ್ರಕ್ಕಾಗಿ ತೀವ್ರ ಪೈಪೋಟಿಯಿದೆ.
ಹಾಲಿ ಸಂಸದೆ ಸುಮಲತಾ ಮಂಡ್ಯ ಬಿಟ್ಟು ಹೋಗಲು ತಯಾರಿಲ್ಲ. ಇತ್ತ ಜೆಡಿಎಸ್ ಗೆ ತನ್ನ ಭದ್ರಕೋಟೆ ಮಂಡ್ಯ ಬಿಟ್ಟುಕೊಡುವ ಮನಸ್ಸಿಲ್ಲ. ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಈ ಕ್ಷೇತ್ರದ ಟಿಕೆಟ್ ಯಾರಿಗೆ ಎನ್ನುವುದು ಕಗ್ಗಂಟಾಗಿದೆ. ಇದೇ ಕಾರಣಕ್ಕೆ ಸುಮಲತಾ ದೆಹಲಿಗೆ ಹೋಗಿ ಪ್ರಧಾನಿ ಮೋದಿ ಬಳಿಯೇ ಮಾತನಾಡಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಮಾತುಕತೆ ನಡೆಸಿ ಬಂದಿದ್ದಾರೆ. ಮೋದಿ ಕೂಡಾ ಸುಮಲತಾಗೆ ಒಟ್ಟಿಗೇ ಕೆಲಸ ಮಾಡುವುದನ್ನು ಮುಂದುವರಿಸೋಣ ಎಂದು ಭರವಸೆ ನೀಡಿದ್ದಾರೆ.
ಸುಮಲತಾ ಭವಿಷ್ಯ ನಾಳೆ ನಿರ್ಧಾರ
ಲೋಕಸಭೆ ಚುನಾವಣೆ ವಿಚಾರವಾಗಿ ರಾಜ್ಯಕ್ಕೆ ಇಂದು ಆಗಮಿಸುತ್ತಿರುವ ಗೃಹ ಸಚಿವ ಅಮಿತ್ ಶಾ ಟಿಕೆಟ್ ಹಂಚಿಕೆ ಕುರಿತೂ ನಾಳೆ ಚರ್ಚೆ ನಡೆಸಲಿದ್ದಾರೆ. ಹೀಗಾಗಿ ನಾಳೆ ಮೈಸೂರಿನಲ್ಲಿ ಸರಣಿ ಸಭೆ ನಡೆಸಲಿದ್ದು, ಇದೇ ಸಂದರ್ಭದಲ್ಲಿ ಸುಮಲತಾ ವಿಚಾರವೂ ತೀರ್ಮಾನವಾಗಲಿದೆ. ಮಂಡ್ಯ ಕ್ಷೇತ್ರದಿಂದ ಸುಮಲತಾಗೆ ಟಿಕೆಟ್ ನೀಡುವುದೋ, ಜೆಡಿಎಸ್ ಗೆ ಬಿಟ್ಟುಕೊಡುವುದೋ ಎಂಬುದು ನಾಳೆ ತೀರ್ಮಾನವಾಗಲಿದೆ.
ಒಂದು ವೇಳೆ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟರೆ ಸುಮಲತಾ ಸಮಾಧಾನಿಸಲು ರಾಜ್ಯಸಭೆ ಟಿಕೆಟ್ ನೀಡಿದರೂ ಅಚ್ಚರಿಯಿಲ್ಲ. ಅದೂ ಇಲ್ಲದೇ ಹೋದರೆ ಸುಮಲತಾ ಸ್ವತಂತ್ರವಾಗಿ ಸ್ಪರ್ಧಿಸಲೂ ಮುಂದಾಗಬಹುದು. ಹೀಗಾಗಿ ಮಂಡ್ಯ ರಣ ಕಣದ ಬಗ್ಗೆ ನಾಳೆ ಸ್ಪಷ್ಟ ಚಿತ್ರಣ ಸಿಗಲಿದೆ.