ಮಂಡ್ಯ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿ ಈಗ ಹಾಲಿ ಸಂಸದೆ ಸುಮಲತಾ ಅಂಬರೀಶ್ ಗೆ ಉರುಳಾಗಿದೆ.
ಮಂಡ್ಯ ಟಿಕೆಟ್ ಗಾಗಿ ಸುಮಲತಾ ಮತ್ತು ಜೆಡಿಎಸ್ ನಡುವೆ ತೀವ್ರ ಪೈಪೋಟಿಯಿದೆ. ಕಳೆದ ಬಾರಿ ಇದೇ ಕ್ಷೇತ್ರದಲ್ಲಿ ಜೆಡಿಎಸ್ ಸುಮಲತಾ ಎದುರು ಸೋತಿತ್ತು. ಆದರೆ ಈ ಬಾರಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಕಾರಣ ಜೆಡಿಎಸ್ ಆ ಕ್ಷೇತ್ರಕ್ಕೆ ಬೇಡಿಕೆಯಿಟ್ಟಿದೆ. ಆದರೆ ಈಗ ಬಿಜೆಪಿ ಸೇರಿರುವ ಸುಮಲತಾಗೆ ಮಂಡ್ಯ ಬಿಟ್ಟುಕೊಡುವ ಮನಸ್ಸಿಲ್ಲ. ಸ್ಪರ್ಧಿಸಿದರೆ ಮಂಡ್ಯದಿಂದಲೇ ಎಂದು ಪಟ್ಟುಹಿಡಿದಿದ್ದಾರೆ. ಇದಕ್ಕೆ ಅವರಿಗೆ ಸ್ಥಳೀಯ ನಾಯಕರ ಬೆಂಬಲವೂ ಇದೆ.
ಇಂದು ನಡೆಯಲಿದೆ ಮಹತ್ವದ ಸಭೆ
ಜೆಡಿಎಸ್ ಈಗಾಗಲೇ ಮಂಡ್ಯ, ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಬೇಡಿಕೆಯಿಟ್ಟಿದೆ. ಆದರೆ ಮಂಡ್ಯದಲ್ಲಿ ಟಿಕೆಟ್ ಜೆಡಿಎಸ್ ಗೆ ಬಿಟ್ಟು ಕೊಡುವುದಕ್ಕೆ ಬಿಜೆಪಿಯ ಸ್ಥಳೀಯ ನಾಯಕರಿಂದ ವಿರೋಧವಿದೆ. ಹೀಗಾಗಿ ಇದು ಸುಮಲತಾಗೆ ಪ್ಲಸ್ ಪಾಯಿಂಟ್ ಆಗಬಹುದು. ಇಂದು ಬೆಳಿಗ್ಗೆ 11 ಗಂಟೆಗೆ ಬಿಜೆಪಿ ಜಿಲ್ಲಾ ನಾಯಕರು ಸಭೆ ನಡೆಸಲಿದ್ದು, ತಮ್ಮ ಅಂತಿಮ ನಿರ್ಧಾರ ಮಾಡಲಿದ್ದಾರೆ. ಹೀಗಾಗಿ ಮಂಡ್ಯದಲ್ಲಿ ಸುಮಲತಾ ಇರುತ್ತಾರೆಯೇ ಜೆಡಿಎಸ್ ಬರುತ್ತದೆಯೇ ಎನ್ನುವುದಕ್ಕೆ ಇಂದು ಒಂದು ಹಂತದ ಉತ್ತರ ಸಿಗಲಿದೆ.
ಸುಮಲತಾಗೆ ಕಾಂಗ್ರೆಸ್ ಬಾಗಿಲು ಕೂಡಾ ಬಂದ್ ಆಗಿರುವುದರಿಂದ ಅವರ ಸ್ಪರ್ಧೆ ವಿಚಾರ ಅತಂತ್ರವಾಗಿದೆ. ಮಂಡ್ಯ ಬಿಟ್ಟರೆ ಸುಮಲತಾಗೆ ಬಿಜೆಪಿಯೇನೋ ಬೇರೆ ಕಡೆ ಟಿಕೆಟ್ ಆಫರ್ ನೀಡಬಹುದು. ಆದರೆ ಅವರು ಅಲ್ಲಿಂದ ಸ್ಪರ್ಧಿಸುವ ಸಾಧ‍್ಯತೆಯಿಲ್ಲ. ಹೀಗಾಗಿ ಇಂದಿನ ಸಭೆ ಮಹತ್ವ ಪಡೆದುಕೊಂಡಿದೆ.