ಮಂಡ್ಯ: ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮುಂದಿನ ನಡೆಯೇನು ಎಂಬುದು ಇಂದು ತೀರ್ಮಾನವಾಗುವ ಸಾಧ‍್ಯತೆಯಿದೆ.
ಮಂಡ್ಯದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಚ್ ಡಿ ಕುಮಾರಸ್ವಾಮಿ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತವಾಗಿದೆ. ಬಿಜೆಪಿ ಕೂಡಾ ಮಂಡ್ಯ ಟಿಕೆಟ್ ಜೆಡಿಎಸ್ ಗೆ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಸುಮಲತಾಗೆ ಟಿಕೆಟ್ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಹಾಗಾಗಿ ಅವರ ಮುಂದಿನ ನಡೆಯೇನು ಎಂಬುದು ಕುತೂಹಲ ಮೂಡಿಸಿದೆ.
ದೆಹಲಿ ಮಟ್ಟದಲ್ಲಿ ಲಾಬಿ ನಡೆಸಿದರೂ ಸುಮಲತಾಗೆ ಲಾಭವಾಗಲಿಲ್ಲ. ಬಿಜೆಪಿ ನಾಯಕರು ಮಾತ್ರ, ಸುಮಲತಾಗೆ ಮುಂದೆ ಉತ್ತಮ ಭವಿಷ್ಯವಿದೆ ಎಂದಿದ್ದಾರೆ. ಆದರೆ ಮಂಡ್ಯ ಟಿಕೆಟ್ ಇಲ್ಲದೇ ಬೇರೆ ಕಡೆ ನಿಲ್ಲಲ್ಲ ಎಂದು ಸುಮಲತಾ ಪಟ್ಟು ಹಿಡಿದಿದ್ದಾರೆ. ಸ್ಥಳೀಯ ನಾಯಕರ ಬೆಂಬಲವೂ ಅವರಿಗಿದೆ.
ಈ ಹಿನ್ನಲೆಯಲ್ಲಿ ಸುಮಲತಾ ಇಂದು ಮಂಡ್ಯದಲ್ಲಿ ಕಾರ್ಯಕರ್ತರ ಜೊತೆ ಸಭೆ ನಡೆಸಲಿದ್ದಾರೆ. ಇಂದಿನ ಸಭೆಯಲ್ಲಿ ಅವರ ಮುಂದಿನ ನಡೆಯೇನು ಎಂದು ಕಾರ್ಯಕರ್ತರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ‍್ಳಲಿದ್ದಾರೆ. ಈ ಮೂಲಕ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಕೊಡುತ್ತಾರಾ ಅಥವಾ ಬೇರೆ ನಿರ್ಧಾರಕ್ಕೆ ಬರಲಿದ್ದಾರಾ ಎನ್ನುವುದು ಇಂದು ಗೊತ್ತಾಗಲಿದೆ.