ಸ್ವಂತ ತಂದೆಯಿಂದಲೇ ಮಗನ ಕೊಲೆಗೆ ಸುಪಾರಿ : ಒಂದು ಸುಣ್ಣದ ಡಬ್ಬಿ ಹತ್ಯೆಯ ಕಥೆ ಹೇಳಿತು!

ಶನಿವಾರ, 26 ಆಗಸ್ಟ್ 2023 (13:31 IST)
ಬೆಳಗಾವಿ : ಹೆತ್ತಪ್ಪನೇ ಮಗನ ಕೊಲೆಗೆ ಮನೆ ಕೆಲಸದವನಿಗೆ ಸುಪಾರಿ ಕೊಟ್ಟು ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿಸಿರುವ ಘಟನೆ ಬೈಲಹೊಂಗಲ ತಾಲೂಕಿನ ಕುಟರನಟ್ಟಿ ಗ್ರಾಮದಲ್ಲಿ ನಡೆದಿದ್ದು, ಇಬ್ಬರು ಆರೋಪಿಗಳನ್ನು ಮುರಗೋಡ ಪೊಲೀಸರು ಬಂಧಿಸಿದ್ದಾರೆ.
 
ಬೈಲಹೊಂಗಲ ಪಟ್ಟಣದ ನಿವಾಸಿ ಸಂಗಮೇಶ ತಿಗಡಿ (38) ಕೊಲೆಯಾದ ವ್ಯಕ್ತಿ. ಮಾರುತೆಪ್ಪ ತಿಗಡಿ (72) ಮಗನ ಕೊಲೆಗೆ ಸುಪಾರಿ ಕೊಟ್ಟ ಅಪ್ಪ. ಆಗಸ್ಟ್ 20ರಂದು ರಾತ್ರಿ ಸಂಗಮೇಶಗೆ ಮದ್ಯ ಕುಡಿಸಿ ಕುಟರನಟ್ಟಿ ಗ್ರಾಮದ ಹೊರವಲಯದಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. 

ಹತ್ಯೆಯಾದವನ ಕಿಸೆಯಲ್ಲಿದ್ದ ಸುಣ್ಣದ ಡಬ್ಬಿ ಆರೋಪಿಯನ್ನು ಪತ್ತೆಹಚ್ಚಲು ಸಹಾಯ ಮಾಡಿದೆ. ಮೃತನ ಜೇಬಲ್ಲಿದ್ದ ಸುಣ್ಣದ ಡಬ್ಬಿಯಲ್ಲಿ ಕೊಲೆ ಮಾಡಿದ ಹಂತಕನ ನಂಬರ್ ಇತ್ತು. ತನ್ನ ಬಳಿ ಮೊಬೈಲ್ ಇಲ್ಲದ್ದಕ್ಕೆ ಮನೆಗೆಲಸ ಮಾಡುತ್ತಿದ್ದಾತನ ನಂಬರ್ ಅನ್ನು ಚೀಟಿಯಲ್ಲಿ ಬರೆದು ಸುಣ್ಣದ ಡಬ್ಬಿಯಲ್ಲಿ ಸಂಗಮೇಶ ಇಟ್ಟುಕೊಂಡಿದ್ದ. 

ಪ್ರಕರಣದ ಹಿಂದೆ ಬಿದ್ದ ಪೊಲೀಸರು ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಸಂಗಮೇಶ ಮನೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಕುಡಿದು ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ