ನವದೆಹಲಿ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮಾಜಿ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ತೆರಳಿ, ವಾಸ್ತವ್ಯ ಹೂಡಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಆದರೆ, ಅಲ್ಲಿ ವಾಸ್ತವ್ಯ ಹೂಡುವ ಅವಧಿಯನ್ನು 8 ವಾರಕ್ಕಷ್ಟೇ ಸೀಮಿತಗೊಳಿಸಿದೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿ 2015ರಲ್ಲಿ ಸುಪ್ರೀಂಕೋರ್ಟ್ನಿಂದ ಜಾಮೀನು ಪಡೆದುಕೊಂಡಿದ್ದ ಜನಾರ್ದನ ರೆಡ್ಡಿ, ಬಳ್ಳಾರಿಗೆ ಹೋಗಲು ಅನುಮತಿ ಕೋರಿ ಹಲವು ಬಾರಿ ಮನವಿ ಮಾಡಿಕೊಂಡಿದ್ದರು. ಗುರುವಾರ ನ್ಯಾ. ವಿನೀತ್ ಶರಣ್ ನೇತೃತ್ವದ ನ್ಯಾಯಪೀಠದ ಮುಂದೆ ವಾದ ಮಂಡಿಸಿದ ರೆಡ್ಡಿ ಪರ ವಕೀಲ ಮುಕುಲ್ ರೋಹಟಗಿ, ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಕೆಳ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ಆರಂಭಗೊಂಡಿಲ್ಲ ಮತ್ತು ತನಿಖೆಯನ್ನು ತ್ವರಿತಗೊಳಿಸಲು ಸಿಬಿಐ ಯಾವುದೇ ಪ್ರಯತ್ನಗಳನ್ನೂ ಮಾಡಿಲ್ಲ. ಅವರ ಬೇಜವಾಬ್ದಾರಿತನಕ್ಕೆ ತಮ್ಮ ಕಕ್ಷಿದಾರ ಏಕೆ ತೊಂದರೆ ಅನುಭವಿಸಬೇಕು ಎಂದು ಪ್ರಶ್ನಿಸಿದರು.
ರೋಹಟಗಿ ವಾದವನ್ನು ಆದ್ಯತೆಗೆ ತೆಗೆದುಕೊಂಡ ನ್ಯಾಯಪೀಠ, ಈ ಹಿಂದೆ ಕೂಡ ಸೀಮಿತ ಅವಧಿಗೆ ಬಳ್ಳಾರಿಗೆ ತೆರಳಲು ರೆಡ್ಡಿಯವರಿಗೆ ಅನುಮತಿ ನೀಡಲಾಗಿತ್ತು ಮತ್ತು ವಿಧಿಸಿದ್ದ ಷರತ್ತುಗಳನ್ನು ಕೂಡ ಅವರು ಉಲ್ಲಂಘಿಸಿದ ನಿದರ್ಶನ ಕಂಡುಬಂದಿಲ್ಲ. ಅಲ್ಲದೆ ಪ್ರಕರಣಗಳ ವಿಚಾರಣೆ ಕೂಡ ಆರಂಭ ಆಗದಿರುವುದನ್ನು ಕೂಡ ಇಲ್ಲಿ ಪರಿಗಣಿಸಬೇಕಾಗುತ್ತದೆ ಎಂದು ತಿಳಿಸಿ 8 ವಾರಗಳ ಕಾಲ ರಾಜ್ಯದ ಬಳ್ಳಾರಿ, ಆಂಧ್ರಪ್ರದೇಶದ ಕಡಪ ಮತ್ತು ಅನಂತಪುರ ಜಿಲ್ಲೆಗಳಿಗೆ ತೆರಳಿ ವಾಸ್ತವ್ಯ ಹೂಡಬಹುದು ಎಂದು ತಿಳಿಸಿತು.
ರೆಡ್ಡಿ ಪರ ವಾದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಸಿಬಿಐ ಪರ ವಕೀಲೆ, ಹೆಚ್ಚುವರಿ ಸಾಲಿಸಿಟರ್ ಜನರಲ್ ಮಾಧವಿ ದಿವಾನ್, ಅಕ್ರಮ ಗಣಿಗಾರಿಕೆ ಪ್ರಕರಣಗಳಿಗೆ ಸಂಬಂಧಿಸಿದ 47 ಸಾಕ್ಷಿಗಳು ಬಳ್ಳಾರಿಯಲ್ಲಿ ನೆಲೆಸಿದ್ದಾರೆ. ಹೀಗಿರುವಾಗ ಪ್ರಮುಖ ಆರೋಪಿಗೆ ಆ ಜಿಲ್ಲೆಗೆ ತೆರಳಲು ಅನುಮತಿ ನೀಡುವುದು ಅಪಾಯಕ್ಕೆ ಎಡೆಮಾಡಿಬಹುದು. ಆರೋಪಿ ಈ ಹಿಂದೆ ನ್ಯಾಯಾಂಗ ವಿಚಾರಣೆಯ ಹಾದಿ ತಪ್ಪಿಸಲು ಪ್ರಯತ್ನಿಸಿದ್ದರು, ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು ಮುಂದಾಗಿದ್ದರು. ಇದನ್ನೆಲ್ಲ ಪರಿಗಣಿಸಿ ಬಳ್ಳಾರಿಗೆ ಹೋಗಲು ಸಮ್ಮತಿಸಬಾರದು ಎಂದರು.