ಗೌರಿ ಹತ್ಯೆಯಾದ ಕೆಲವೇ ನಿಮಿಷಗಳಲ್ಲಿ ಅಲ್ಲಿ ರಸ್ತೆಯಲ್ಲಿ ಹೋದವಾ ಹಂತಕನಾ..?

ಶುಕ್ರವಾರ, 8 ಸೆಪ್ಟಂಬರ್ 2017 (10:42 IST)
ದಿಟ್ಟೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ತೀವ್ರಗತಿಯಲ್ಲಿ ಸಾಗಿದೆ. ನಿನ್ನೆ ಎಸ್ಐಟಿ ತಂಡ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಇವತ್ತು ಬೆಳ್ಳಂ ಬೆಳಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಗೌರಿ ಲಂಕೇಶ್ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.

ನಿವಾಸದ ಗೇಟ್ ಬಳಿ ಹತ್ಯೆ ನಡೆದ ಸ್ಥಳ, ಸುತ್ತಮುತ್ತಲಿನ ಪರಿಸರದ ವಿಡಿಯೋ ಚಿತ್ರೀಕರಣ ನಡೆಯುತ್ತಿದೆ. ನಿನ್ನೆ ಗೌರಿ ಲಂಕೇಶ್ ನಿವಾಸದ ಬಳಿ ಸಿಕ್ಕ ಎರಡು ಬುಲೆಟ್`ಗಳನ್ನ ವಿಧಿ ವಿಜ್ಞಾನ ಪ್ರಯೋಗಾಲಕ್ಕೆ ಕಳುಹಿಸಲಾಗಿದೆ. ಇತ್ತ, ತನಿಖೆ ಚುರುಕುಗೊಳಿಸಿರುವ ಎಸ್`ಐಟಿ ಅಧಿಕಾರಿಗಳು ಎಂ.ಎಂ. ಕಲ್ಬುರ್ಗಿ ಹತ್ಯೆ ಪ್ರಕರಣದ ಫೈಲ್ ತರಿಸಿಕೊಂಡು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈ ಮಧ್ಯೆ, ಗೌರಿ ಲಂಕೇಶ್ ಹತ್ಯೆ ಬಳಿಕ ರಾಜರಾಜೇಶ್ವರಿನಗರದ ಗ್ಲೋಬಲ್ ಕಾಲೇಜು ಬಳಿ ರಸ್ತೆಯಲ್ಲಿ ಅನುಮಾನಾಸ್ಪದ ವ್ಯಕ್ತಿಯೊಬ್ಬ ಹೋಗಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹೌದು, ಗೌರಿ ಹತ್ಯೆ ವೇಳೆ ಜರ್ಕಿನ್ ಮತ್ತು ಜಾಕೆಟ್ ಹಾಕಿಕೊಂಡಿದ್ದ ವ್ಯಕ್ತಿ ಆ ಬಳಿಕ ಅವುಗಳನ್ನ ತೆಗೆದು ಸ್ಕೂಟಿಯಲ್ಲಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಈ ಅನುಮಾನಕ್ಕೆ ಇಂಬು ನೀಡುವ ರೀತಿ ಆತ ಸಂಚರಿಸುತ್ತಿರುವ ಅದೇ ಸ್ಥಳದಲ್ಲಿ ಒಂದು ಮೊಬೈಲ್ ಸ್ವಿಚ್ ಆನ್ ಸ್ವಿಚ್ ಆಫ್ ಆಗಿದೆ. ಹೀಗಾಗಿ, ಮೊಬೈಲ್ ಟವರ್ ಮೂಲಕ ನಂಬರ್ ಪತ್ತೆ ಹಚ್ಚುತ್ತಿರುವ ತನಿಖಾಧಿಕಾರಿಗಳು ಆ ಅನುಮಾನಾಸ್ಪದ ವ್ಯಕ್ತಿಯ ತನಿಖೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ