ಬೆಳಗಾವಿ ಸುವರ್ಣ ಸೌಧ ಹೈಜಾಕ್ ಮಾಡಿದ ಇಲಿ-ಹೆಗ್ಗಣ...!

ಸೋಮವಾರ, 31 ಅಕ್ಟೋಬರ್ 2016 (16:22 IST)
ಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗುವ ದಿನ ಸಮೀಪಿಸುತ್ತಿದ್ದಂತೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು  ಬೀಡು ಬಿಟ್ಟಿರುವ ಇಲಿ-ಹೆಗ್ಗಣಗಳನ್ನು ಓಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

 
ವರ್ಷಪೂರ್ತಿ ಖಾಲಿಬಿದ್ದಿರುವ ಸುವರ್ಣ ವಿಧಾನಸೌಧದಲ್ಲಿ ಇಲಿ, ಹೆಗ್ಗಣಗಳದ್ದೇ ಕಾರುಬಾರು. ಅಧಿವೇಶನದ ಹಿನ್ನೆಲೆಯಲ್ಲಿ ವಿಧಾನಸೌಧ ಶುಚಿ ಮಾಡಲೆಂದು ಅಧಿಕಾರಿಗಳು ಬಾಗಿಲು ತೆರೆದರೆ, ಕಣ್ಣಾಡಿಸಿದಲ್ಲೆಲ್ಲ ಹೆಗ್ಗಣಗಳ ಆಟಾಟೋಪ. ಸಂಪೂರ್ಣ ಸೌಧವನ್ನೇ ಹೈಜಾಕ್ ಮಾಡಿಕೊಂಡು, ತಾನೇ ಸಾಮ್ರಾಜ್ಯದ ಅಧಿಪತಿಯೆನ್ನುವಂತೆ ನಿರ್ಭಯವಾಗಿ ಅತ್ತಿಂದಿತ್ತ, ಅತ್ತಿಂದಿತ್ತ ಓಡಾಡುತ್ತಿತ್ತು.
 
ಧೂಳು, ಕಸ ತೆಗೆಯಲೆಂದು ಕಾರ್ಮಿಕರ ಜೊತೆ ಬಂದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ, ಇಲಿಗಳನ್ನು ಹೇಗೆ ಹೊರಹಾಕಬೇಕೆನ್ನುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಒಂದು ಕಡೆ ಇಲಿಯನ್ನು ಓಡಿಸಿದರೆ ಇನ್ನೊಂದು ಕಡೆ ಹೆಗ್ಗಣ ಕಾಣಿಸಿಕೊಳ್ಳುತ್ತವೆ. ಮತ್ತೊಂದು ಕಡೆ ಇಲಿ ಮತ್ತು ಹೆಗ್ಗಣ ಎರಡೂ ಒಟ್ಟೊಟ್ಟಿಗೆ ಓಡಾಡುವುದು ಕಾಣಿಸುತ್ತಿವೆ. ಅಧಿಕಾರಿಗಳಿಗೆ ಇದು ತೀರಾ ಕಿರಿಕಿರಿಯಾಗುತ್ತಿದ್ದು ಏನು ಮಾಡಬೇಕೆಂದು ತೋಚದೆ ನಿಸ್ಸಹಾಯಕರಾಗಿದ್ದಾರೆ.
 
ಹಾಗೆಯೇ ಬಿಟ್ಟರೆ ಅಧಿವೇಶನದ ವೇಳೆ ಎಲ್ಲಿಯಾದರೂ, ಸಚಿವ, ಶಾಸಕರ ಎದುರು ಸುಳಿದಾಡಿದರೆ ಮುಂದೇನು ಎನ್ನುವ ಚಿಂತೆ ಅವರನ್ನು ಕಾಡುತ್ತಿದೆ. ಆದರೂ ಒಂದು ಪ್ರಯೋಗ ಮಾಡೋಣವೆಂದು ನಿರ್ಧರಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಹೆಗ್ಗಣ ಹಾಗೂ ಇಲಿಗಳ ಹುತ್ತುಗಳನ್ನು ಮುಚ್ಚುವ ಕಾರ್ಯಾಚರಣೆಗೆ ಇಳಿದಿದ್ದಾರೆ. ವಿಧಾನಸೌಧದ ವಿಶಾಲವಾದ ಪ್ರಾಂಗಣದಲ್ಲಿ ಹಾಗೂ ಅಧಿವೇಶನ ನಡೆಯುವ ಸಭಾಂಗಣದ ಇಂಚಿಂಚು ಭಾಗವನ್ನು ಸಹ ಕಣ್ಣಲ್ಲಿ ಕಣ್ಣಿಟ್ಟು ಪರೀಕ್ಷಿಸುತ್ತಿದ್ದಾರೆ. ಹುತ್ತಗಳು ಏನಾದರೂ ಕಂಡು ಬಂದರೆ ಅಲ್ಲೆಲ್ಲ ಸಿಮೆಂಟ್ ಹಾಕಿ ಬಂದ್ ಮಾಡುತ್ತಿದ್ದಾರೆ. ಕೆಲವು ಕಡೆ ಹೆಗ್ಗಣಗಳು ಸಿಮೆಂಟ್ ಹಾಕಲಾರದಷ್ಟು ದೊಡ್ಡ ಹೊಂಡ ಕೊರೆದು ಸುರಂಗ ನಿರ್ಮಿಸಿದೆ ಎನ್ನಲಾಗುತ್ತಿದೆ.
 
ಒಟ್ಟಾರೆ ಧೂಳು ಹೊಡೆದು, ಕಸ ತೆಗೆಯಲು ಬಂದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೆಗ್ಗಣ ಓಡಿಸುವ ಕಾರ್ಯದಲ್ಲಿ ಮುಗ್ನರಾಗಿದ್ದಾರೆ. 500 ಕೋಟಿ ರು. ಖರ್ಚು ಮಾಡಿ ನಿರ್ಮಿಸಿರುವ ಈ ಸುವರ್ಣ ಸೌಧ ವರ್ಷಕ್ಕೆ ಕೇವಲ 10ದಿನ ಮಾತ್ರ ಬಳಕೆಯಾಗುತ್ತದೆ ಎಂದರೆ ವಿಪರ್ಯಾಸವೇ. ಈ ಕುರಿತು ಯಾವೊಬ್ಬ ಜನಪ್ರತಿನಿಧಿಯೂ ಗಟ್ಟಿಯಾಗಿ ಧ್ವನಿ ಎತ್ತದಿರುವುದು ಸೋಜಿಗವೇ. ಸಮರ್ಪಕವಾಗಿ ಬಳಕೆಯಾಗುತ್ತಿಲ್ಲದ ಕಾರಣ ಸಹಜವಾಗ ಹಾಳುಬಿದ್ದ ಜಾಗದಲ್ಲಿ ಇಲಿ-ಹೆಗ್ಗಣಗಳು ಬಂದು ವಾಸಿಸುತ್ತವೆ. ಇದು ಆಡಳಿತ ಪಕ್ಷಕ್ಕೆ ಹಾಗೂ ಆಯ್ಕೆಯಾದ ಜನಪ್ರತಿನಿಧಿಗಳಿಗೆ ನಾಚಿಕೆಯ ವಿಷಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ