ಟ್ಯಾಬ್ಲೆಟ್ ಮರೆತುಹೋದ ಪ್ರಯಾಣಿಕ ವಿಮಾನ ಸಿಬ್ಬಂದಿ ಬಂಧನ

ಮಂಗಳವಾರ, 15 ಫೆಬ್ರವರಿ 2022 (15:54 IST)
ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟುಹೋಗಿದ್ದ ಟ್ಯಾಬ್ಲೆಟ್ ಕಂಪ್ಯೂಟರ್ ನ್ನು ಕಳ್ಳತನ ಮಾಡಿದ ಆರೋಪದ ಮೇಲೆ ವಿಮಾನ ನಿಲ್ದಾಣ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಮೊನ್ನೆ ಫೆಬ್ರವರಿ 10ರಂದು ಜೈಪುರದಿಂದ ಬೆಂಗಳೂರಿಗೆ ಬಂದಿಳಿದ ಗೋ ಫಸ್ಟ್ ವಿಮಾನದಲ್ಲಿ ಪ್ರಯಾಣಿಕ ಟ್ಯಾಬ್ ನ್ನು ಬಿಟ್ಟುಹೋಗಿದ್ದರು.
ಬಂಧಿತ ಸಿಬ್ಬಂದಿಯನ್ನು ಮುರಳಿ ಎಂದು ಗುರುತಿಸಲಾಗಿದ್ದು ಈತ ನಿಲ್ದಾಣದ ಸೇವೆ ಒದಗಿಸುವ ವಿಭಾಗ CELEBIಯಲ್ಲಿ ಕೆಲಸ ಮಾಡುತ್ತಿದ್ದರು. ಮೊನ್ನೆ ಫೆಬ್ರವರಿ 10ರಂದು ಗೋ ಫಸ್ಟ್ ವಿಮಾನ ಸಂಖ್ಯೆ ಜಿ8 807 ಬೆಳಗ್ಗೆ 6.40ಕ್ಕೆ ಬೆಂಗಳೂರು ಬಂದು ತಲುಪಿತ್ತು. ವಿಮಾನದಿಂದ ಇಳಿದು ಹೋದ ಮೇಲೆ ಪ್ರಯಾಣಿಕನಿಗೆ ತಾನು ವಿಮಾನದೊಳಗೆ ಟ್ಯಾಬ್ಲೆಟ್ ಬಿಟ್ಟು ಬಂದಿದ್ದೇನೆ ಎಂದು ಗೊತ್ತಾಯಿತು. ವಿಮಾನ ಸಿಬ್ಬಂದಿಗೆ ತಿಳಿಸಿದರು. ನಂತರ ಏರ್ ಪೋರ್ಟ್ ಸ್ಟೇಷನ್ ನಲ್ಲಿ ಕೇಸು ದಾಖಲಾಗಿತ್ತು. ಪೊಲೀಸರು ಕೇಂಗ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ ಎಫ್ )ಗೆ ಮಾಹಿತಿ ನೀಡಿದ್ದರು.
 
ಸಿಐಎಸ್ ಎಫ್ ಅಂದೇ ಎಲ್ಲಾ ಸಿಬ್ಬಂದಿಯನ್ನು ತಪಾಸಣೆ ಮಾಡಿದಾಗ ಮುರಳಿ ಎಂಬುವವರು ಸಿಕ್ಕಿಹಾಕಿಕೊಂಡರು. ಪ್ರಯಾಣಿಕರು ವಿಮಾನದೊಳಗೆ ಆಗಾಗ ಗ್ಯಾಜೆಟ್ ಗಳನ್ನು ಬಿಟ್ಟುಹೋಗುತ್ತಾರೆ. ಪ್ರಯಾಣಿಕರು ವಸ್ತುಗಳನ್ನು ಬಿಟ್ಟುಹೋದಾಗ ಅದರ ಬಗ್ಗೆ ಕೂಡಲೇ ವಿಮಾನ ಸಿಬ್ಬಂದಿಗೆ ತಿಳಿಸಿ ಪ್ರಯಾಣಿಕರಿಗೆ ಸುರಕ್ಷಿತವಾಗಿ ತಲುಪಿಸುವುದು ಸಿಬ್ಬಂದಿಗಳ ಕರ್ತವ್ಯವಾಗಿರುತ್ತದೆ. ವಿಮಾನ ನಿಲ್ದಾಣದ ಲಾಸ್ಟ್ ಅಂಡ್ ಫೌಂಡ್ ವಿಭಾಗದಲ್ಲಿ ಇರಿಸಬೇಕು.
 
ಪ್ರಯಾಣಿಕ ಬಿಟ್ಟುಹೋಗಿದ್ದ ಸ್ಯಾಮ್ ಸಂಗ್ ಟ್ಯಾಬ್ಲೆಟ್ 15 ಸಾವಿರ ರೂಪಾಯಿ ಬೆಲೆಬಾಳುವದ್ದಾಗಿದೆ. ಇದು ಕಳ್ಳತನದ ಪ್ರಕರಣವಾಗಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 380 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಾವು ಆತನನ್ನು ಬಂಧಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಮಾನಯಾನ ಸಂಸ್ಥೆಯು ಪ್ರಯಾಣಿಕನಿಗೆ ತಿಳಿಸಿ ಅವರು ಬಂದು ತಮ್ಮ ವಸ್ತುವನ್ನು ತೆಗೆದುಕೊಂಡು ಹೋಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ