ಬೆಂಗಳೂರು: ಕರ್ನಾಟಕ ಸರ್ಕಾರ ದಿನಕ್ಕೊಂದರ ಮೇಲೆ ಬೆಲೆ ಏರಿಕೆ ಬರೆ ಎಳೆಯುತ್ತಿದೆ. ಇದೀಗ ವಾಯು ವಿಹಾರಿಗಳಿಗೂ ಸುಂಕ ವಿಧಿಸಲು ಮುಂದಾಗಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಗ್ಯಾರಂಟಿಗಾಗಿ ಎಲ್ಲೆಲ್ಲಾ ವಸೂಲಿ ಮಾಡ್ತಾರಪ್ಪೋ ಎಂದು ಕಿಡಿ ಕಾರಿದ್ದಾರೆ.
ರಾಜ್ಯ ಸರ್ಕಾರಕ್ಕೆ ಈಗ ಗ್ಯಾರಂಟಿಗಳಿಗೆ ಹಣ ಹೊಂದಿಸುವುದೇ ದೊಡ್ಡ ಸವಾಲಾಗಿದೆ. ಅದಕ್ಕಾಗಿಯೇ ಈಗ ಸಿಕ್ಕ ಸಿಕ್ಕಲ್ಲಿ ತೆರಿಗೆ, ದರ ಏರಿಕೆ ಬರೆ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈಗಾಗಲೇ ಬಸ್ ಪ್ರಯಾಣ ದರ ಏರಿಕೆ ಮಾಡಿದ್ದು, ಸದ್ಯದಲ್ಲೇ ವಿದ್ಯುತ್, ಹಾಲಿನ ದರ ಏರಿಕೆ ಮಾಡಲು ಯೋಜನೆ ರೂಪಿಸಲಾಗಿದೆ.
ಇದೀಗ ಸರ್ಕಾರೀ ಕ್ರೀಡಾಂಗಣದಲ್ಲಿ ತರಬೇತಿ ಪಡೆಯುತ್ತಿರುವ ಕ್ರೀಡಾಳುಗಳು, ವಾಯು ವಿಹಾರಿಗಳಿಗೂ ಸುಂಕ ವಿಧಿಸಲು ಸರ್ಕಾರ ಮುಂದಾಗಿದೆ. ವಾಯುವಿಹಾರಿಗಳಿಗೂ ಶುಲ್ಕ ವಿಧಿಸುವ ಬಗ್ಗೆ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. ಮಾರ್ಚ್ 1 ರಿಂದಲೇ ಇದು ಜಾರಿಗೆ ಬರಲಿದೆ.
ತುಮಕೂರು ನಗರದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ವಾಕಿಂಗ್ ಮಾಡುವ ಕ್ರೀಡಾಪಟುಗಳು, ವಾಯುವಿಹಾರಿಗಳಿಗೆ ಈಗ 300 ರೂ. ಶುಲ್ಕ ವಿಧಿಸಲು ಆದೇಶ ಹೊರಡಿಸಲಾಗಿದೆ. ವಾಯುವಿಹಾರಿಗಳಿಗೆ ಮಾಸಿಕ 300 ರೂ. ಶುಲ್ಕ, ಕ್ರೀಡಾಪಟುಗಳಿಗೆ ವಾರ್ಷಿಕವಾಗಿ 5,000 ರೂ. ಶುಲ್ಕ ವಿಧಿಸಲು ಆದೇಶ ಹೊರಡಿಸಲಾಗಿದೆ. ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಒಂದೆಡೆ ಪದಕ ಗೆದ್ದು ತನ್ನಿ ಎನ್ನುವ ಸರ್ಕಾರವೇ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಬದಲು ಶುಲ್ಕದ ಬರೆ ವಿಧಿಸಿದರೆ ಅವರು ಅಭ್ಯಾಸ ನಡೆಸಲು ಎಲ್ಲಿಗೆ ಹೋಗಬೇಕು ಎಂದು ಆಕ್ರೋಶ ಕೇಳಿಬಂದಿದೆ.