ತಿರುವನಂತಪುರಂ: ಕೀನ್ಯಾ ಮಾಜಿ ಪ್ರಧಾನಿ ರೈಲಾ ಒಡಿಂಗಾ ಅವರು ಅನಾರೋಗ್ಯಕ್ಕಾಗಿ ಆಯುರ್ವೇದ ಚಿಕಿತ್ಸೆಗೆಂದು ಭಾರತಕ್ಕೆ ಬಂದಿದ್ದರು. ಅವರು ಕೇರಳದಲ್ಲಿ ಇಂದು ಹೃದಯಸ್ತಂಭನದಿಂದ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಕೇರಳದ ಎರ್ನಾಕುಲಂ ಜಿಲ್ಲೆಯ ಕೂಥಾಟುಕುಳಂಗೆ 80 ವರ್ಷದ ರೈಲಾ ಒಡಿಂಗಾ ಆಯುರ್ವೇದ ಚಿಕಿತ್ಸೆಗಾಗಿ ಬಂದಿದ್ದರು. ಬುಧವಾರ ಮುಂಜಾನೆ ವಾಕಿಂಗ್ ಮಾಡುತ್ತಿದ್ದ ಸಂದರ್ಭ ಕುಸಿದು ಬಿದ್ದಿದ್ದಾರೆ.
ಅವರನ್ನು ಕೂಡಲೇ ಕೂಥಾಟುಕುಳಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಸ್ಪಂದಿಸದೆ ರೈಲಾ ಒಡಿಂಗಾ ಕೊನೆಯುಸಿರೆಳೆದಿದ್ದಾರೆ. ಸದ್ಯ ರೈಲಾ ಒಡಿಂಗಾ ಅವರ ಮೃತದೇಹವನ್ನು ಆಸ್ಪತ್ರೆಯಲ್ಲೇ ಇರಿಸಲಾಗಿದೆ.
ಮೃತದೇಹ ಹಸ್ತಾಂತರ ಸೇರಿದಂತೆ ಮುಂದಿನ ಪ್ರಕ್ರಿಯೆಗಾಗಿ ಪ್ರಾದೇಶಿಕ ನೋಂದಣಿ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರೈಲಾ ಒಡಿಂಗಾ ಕುಟುಂಬ ಇದಕ್ಕೂ ಮೊದಲು ಈ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಹಿಂದೆ ರೈಲಾ ಒಡಿಂಗಾ ಅವರ ಪುತ್ರಿ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕಣ್ಣಿನ ದೃಷ್ಟಿ ಮರಳಿ ಪಡೆದಿದ್ದರು.
ನನ್ನ ಆತ್ಮೀಯ ಸ್ನೇಹಿತ ಮತ್ತು ಕೀನ್ಯಾದ ಮಾಜಿ ಪ್ರಧಾನಿ ಶ್ರೀ ರೈಲಾ ಒಡಿಂಗಾ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ಉನ್ನತ ರಾಜಕಾರಣಿ ಮತ್ತು ಭಾರತದ ಪ್ರೀತಿಯ ಸ್ನೇಹಿತರಾಗಿದ್ದರು. ಅವರು ಭಾರತ, ನಮ್ಮ ಸಂಸ್ಕೃತಿ, ಮೌಲ್ಯಗಳು ಮತ್ತು ಪ್ರಾಚೀನ ಬುದ್ಧಿವಂತಿಕೆಯ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿದ್ದರು. ಅವರು ವಿಶೇಷವಾಗಿ ಆಯುರ್ವೇದ ಮತ್ತು ಭಾರತದ ಸಾಂಪ್ರದಾಯಿಕ ಔಷಧ ಪದ್ಧತಿಗಳನ್ನು ಮೆಚ್ಚಿದರು. ಈ ದುಃಖದ ಸಮಯದಲ್ಲಿ ನಾನು ಅವರ ಕುಟುಂಬ, ಸ್ನೇಹಿತರು ಮತ್ತು ಕೀನ್ಯಾದ ಜನರಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.