ಡಿ.30ರ ತಾಪಮಾನ ವರದಿ: ರಾಜ್ಯದಲ್ಲಿ ಇನ್ನೂ ಎರಡು ದಿನ ವಿಪರೀತ ಚಳಿ
ಗುರುವಾರ, 30 ಡಿಸೆಂಬರ್ 2021 (21:03 IST)
ಬೆಂಗಳೂರು, ಡಿಸೆಂಬರ್ 30: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಸಹ ಚಳಿ ವಾತಾವರಣ ಮುಂದುವರೆದಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಬೆಳಗ್ಗೆ ದಟ್ಟ ಮಂಜು ಕವಿದ ವಾತಾವರಣ ನಿರ್ಮಾಣವಾಗಲಿದೆ.
ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇನ್ನೆರಡು ದಿನ ಚಳಿ ಹೆಚ್ಚಾಗಲಿದ್ದು, ಮಲೆನಾಡು, ಕರಾವಳಿ, ಕೊಡಗು, ಬೆಂಗಳೂರು, ಮೈಸೂರು, ಉತ್ತರ ಕರ್ನಾಟಕದಲ್ಲಿ ಜನವರಿ 1ರ ಬಳಿಕ ಕರ್ನಾಟಕದಲ್ಲಿ ಶೀತ ಗಾಳಿ ಕಡಿಮೆಯಾಗುವ ಸಾಧ್ಯತೆಯಿದೆ.
ಕಡಲ ನಗರಿ ಕಾರವಾರದಲ್ಲಂತೂ ಕಾಶ್ಮೀರದ ರೀತಿಯ ವಾತಾವರಣ ನಿರ್ಮಾಣವಾಗಿದ್ದು, ಮುಂಜಾನೆ ವೇಳೆ ದಟ್ಟ ಮಂಜು ಆವರಿಸಿರುತ್ತದೆ. ಇನ್ನೂ ಎರಡು ದಿನಗಳ ಕಾಲ ರಾಜ್ಯಾದ್ಯಂತ ಚಳಿ ಮುಂದುವರೆಯಲಿದೆ. ಮಲೆನಾಡು, ಕರಾವಳಿ, ಕೊಡಗು, ಬೆಂಗಳೂರು, ಉತ್ತರ ಕರ್ನಾಟಕದ ಮಂದಿ ಕೊರೆಯುವ ಚಳಿಗೆ ಹೈರಾಣಾಗಿದ್ದರೆ, ಇನ್ನೊಂದೆಡೆ ನೆರೆಯ ರಾಜ್ಯಗಳಲ್ಲಿ ಚಳಿಯ ಜೊತೆಗೆ ಮಳೆಯೂ ಮುಂದುವರೆದಿದೆ.
ರಾಜ್ಯದ ಜಿಲ್ಲಾವಾರು ತಾಪಮಾನ ವರದಿ...
ಬೆಂಗಳೂರು 27-17, ಮೈಸೂರು 29.-17, ಚಾಮರಾಜನಗರ 29-17, ರಾಮನಗರ 28-17, ಮಂಡ್ಯ 29-17, ಬೆಂಗಳೂರು ಗ್ರಾಮಾಂತರ 27-17, ಚಿಕ್ಕಬಳ್ಳಾಪುರ 26-14, ಕೋಲಾರ 26-16, ಹಾಸನ 28-16, ಚಿಕ್ಕಮಗಳೂರು 28-15, ದಾವಣಗೆರೆ 26-21, ಶಿವಮೊಗ್ಗ 30-18, ಕೊಡಗು 29-15, ತುಮಕೂರು 28-17 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಉಡುಪಿ 32-25, ಮಂಗಳೂರು 33-23, ಉತ್ತರ ಕನ್ನಡ 32-18, ಧಾರವಾಡ 30-17, ಹಾವೇರಿ 31-18, ಹುಬ್ಬಳ್ಳಿ 31-17, ಬೆಳಗಾವಿ 29-17, ಗದಗ 29-17, ಕೊಪ್ಪಳ 29-18, ವಿಜಯಪುರ 29-17, ಬಾಗಲಕೋಟ 30-17, ಕಲಬುರಗಿ 30-17, ಬೀದರ್ 26-15, ಯಾದಗಿರಿ 30-18, ರಾಯಚೂರ 30-18, ಬಳ್ಳಾರಿ 29-18 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಈ ರಾಜ್ಯಗಳಲ್ಲಿ ಶೀತಗಾಳಿಯ ಜೊತೆಗೆ ಹಗುರ ಮಳೆ...
ಡಿಸೆಂಬರ್ ಮೊದಲ ವಾರದವರೆಗೂ ಸುರಿದ ಅಕಾಲಿಕ ಮಳೆಯ ನಂತರ, ಹಲವು ರಾಜ್ಯಗಳಲ್ಲಿ ಶೀತ ಗಾಳಿಯ ಜೊತೆ ವಿಪರೀತ ಚಳಿ ಹೆಚ್ಚಾಗಿತ್ತು. ಹರಿಯಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನದಲ್ಲಿ ಶೀತಗಾಳಿಯ ಜೊತೆಗೆ ಹಗುರ ಮಳೆಯೂ ಸುರಿಯುವ ಸಾಧ್ಯತೆಯಿದೆ.
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಶೀತ ಗಾಳಿಯು ಮತ್ತೊಮ್ಮೆ ವಾಯುವ್ಯ ಬಯಲು ಪ್ರದೇಶಗಳಲ್ಲಿ, ವಿಶೇಷವಾಗಿ ಪಂಜಾಬ್, ಹರಿಯಾಣ ಮತ್ತು ಚಂಡೀಗಢದ ಕೆಲವು ಭಾಗಗಳಲ್ಲಿ ಇಂದಿನಿಂದ (ಗುರುವಾರ) ಜನವರಿ 2ರ ಭಾನುವಾರದವರೆಗೆ ಹಗುರ ಮಳೆಯಾಗುವ ನಿರೀಕ್ಷೆಯಿದೆ. ಮುಂದಿನ ಎರಡು ದಿನಗಳಲ್ಲಿ ವಾಯುವ್ಯ ಭಾರತದ ಬಹುತೇಕ ಭಾಗಗಳಲ್ಲಿ ಕನಿಷ್ಠ ತಾಪಮಾನದಲ್ಲಿ 2-4 ಡಿಗ್ರಿ ಸೆಲ್ಸಿಯಸ್‌ನ ಇಳಿಕೆಯಿಂದಾಗಿ ಈ ಶೀತ ಪರಿಸ್ಥಿತಿಗಳು ಉಂಟಾಗುತ್ತವೆ.
ಜನವರಿ 2ರವರೆಗೆ ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ ಮತ್ತು ರಾಜಸ್ಥಾನದಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಡಿಸೆಂಬರ್‌ನಲ್ಲಿ ಉತ್ತರ ಮತ್ತು ವಾಯುವ್ಯ ಭಾರತದ ಕೆಲವು ಭಾಗಗಳಲ್ಲಿ ಚಳಿಗಾಲ ಇರಲಿದೆ. ರಾಜಸ್ಥಾನದ ಕೆಲವು ಸ್ಥಳಗಳಲ್ಲಿ ಮತ್ತು ಹರಿಯಾಣ, ಚಂಡೀಗಢ ಮತ್ತು ದೆಹಲಿಯಲ್ಲಿ ಚಳಿ ಹೆಚ್ಚಾಗಲಿದೆ. ಮಹಾರಾಷ್ಟ್ರದ ಜಿಲ್ಲೆಗಳಾದ್ಯಂತ ನಿನ್ನೆ ಸಂಜೆ ಆಲಿಕಲ್ಲು ಮಳೆ, ಗುಡುಗು ಸಹಿತ ಮಿಂಚಿನ ಮಳೆಯಾಗಿದೆ. ಡಿಸೆಂಬರ್ 31ರಿಂದ ಜನವರಿ 2ರವರೆಗೆ ಪಂಜಾಬ್, ಹರಿಯಾಣ ಮತ್ತು ಚಂಡೀಗಢದಲ್ಲಿ ಶೀತಗಾಳಿ ಉಂಟಾಗಲಿದೆ.
ದಟ್ಟವಾದ ಮಂಜು ಬೀಳುವ ಸಾಧ್ಯತೆ...
ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಇಂದು (ಡಿಸೆಂಬರ್ 30) ಮತ್ತು ಡಿಸೆಂಬರ್ 31 ರಂದು ದಟ್ಟವಾದ ಮಂಜು ಬೀಳುವ ಸಾಧ್ಯತೆಯಿದೆ. ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಇಂದು ಆರೆಂಜ್ ಅಲರ್ಟ್ ನೀಡಲಾಗಿದೆ. ಡಿಸೆಂಬರ್ 31ರ ಹೊತ್ತಿಗೆ ಮಳೆಯು ಸಂಪೂರ್ಣವಾಗಿ ನಿಲ್ಲುತ್ತದೆ. ಪಶ್ಚಿಮ ಬಂಗಾಳದ ಡಾರ್ಜಲಿಂಗ್, ಕಾಲಿಂಪಾಂಗ್, ಪುರುಲಿಯಾ, ಬಂಕುರಾ, ಪಶ್ಚಿಮ-ಮಿಡ್ನಾಪುರ ಮತ್ತು ಜಾರ್‌ಗ್ರಾಮ್ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ.
ಹವಾಮಾನ ಇಲಾಖೆ ಪ್ರಕಾರ, ದೆಹಲಿ, ಪಂಜಾಬ್, ರಾಜಸ್ಥಾನ, ಚಂಡೀಗಢ, ಹರಿಯಾಣ, ಪೂರ್ವ ಮಧ್ಯಪ್ರದೇಶ, ವಿದರ್ಭ ಮತ್ತು ಛತ್ತೀಸ್‌ಗಢದಲ್ಲಿ ಮಳೆ ಎಚ್ಚರಿಕೆ ನೀಡಲಾಗಿದೆ. ಈ ರಾಜ್ಯಗಳಲ್ಲಿ ಡಿಸೆಂಬರ್ 31ರಿಂದ ಜನವರಿ 2ರವರೆಗೆ ಶೀತ ಗಾಳಿಯ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ. ಆದರೆ, ರಾಜಸ್ಥಾನದಲ್ಲಿ ಜನವರಿ 1 ಮತ್ತು 2ರಂದು ತೀವ್ರ ಚಳಿ ಉಂಟಾಗಲಿದೆ. ಐಎಂಡಿ ಪ್ರಕಾರ, ಇಂದು ಬಿಹಾರದಲ್ಲಿ ಶೀತ ವಾತಾವರಣ ಇರಲಿದೆ.