ಮಂಗಳೂರು : ಇದೊಂದು ವ್ಯವಸ್ಥಿತ ಸಂಚು, ದೇಶದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆ ಶುರುವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆತಂಕ ವ್ಯಕ್ತಪಡಿಸಿದರು.
ರಾಜಸ್ಥಾನದಲ್ಲಿ ನೂಪುರ್ ಶರ್ಮಾ ಬೆಂಬಲಿಗನ ಹತ್ಯೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಸ್ಥಾನದಲ್ಲಿ ನಡೆದ ಹಿಂದೂ ಟೈಲರ್ ಹತ್ಯೆ ನಾಚಿಗೆಗೇಡು.
ಇದೊಂದು ವ್ಯವಸ್ಥಿತ ಸಂಚು, ದೇಶದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆ ಶುರುವಾಗಿದೆ. ಇದೇ ಮಾದರಿಯಲ್ಲಿ ಶಿವಮೊಗ್ಗದಲ್ಲೂ ಹರ್ಷನ ಹತ್ಯೆ ನಡೆದಿತ್ತು. ಹರ್ಷನ ಕತ್ತು ಸಿಗಿದು ಹತ್ಯೆ ಮಾಡಿ, ವೀಡಿಯೋವನ್ನು ಹರ್ಷನ ತಂಗಿಗೆ ಕಳುಹಿಸಲಾಗಿತ್ತು ಎಂದು ಅಸಮಾಧಾನಗೊಂಡರು.
ರಾಜಸ್ಥಾನ ಘಟನೆ ಮತ್ತು ಗಲಭೆಯ ಹಿಂದೆ ವಿದೇಶಿ ಕೈವಾಡವಿದೆ. ಅಲ್ಲಿನ ಸರ್ಕಾರದ ಪುಷ್ಟೀಕರಣ ನೀತಿಯ ಕಾರಣದಿಂದ ಈ ಘಟನೆ ಆಗಿದೆ.
ಕಾಂಗ್ರೆಸ್ ಈಗ ಮೌನವಾಗಿರೋದ್ರ ಹಿನ್ನೆಲೆ ಏನು? ಇಂಥಹ ದುಷ್ಕೃತ್ಯ ನಡೆದಾಗ ಕಾಂಗ್ರೆಸ್ ಯಾರ ಪರವಾಗಿರುತ್ತೆ ಅನ್ನೋದು ಮುಖ್ಯ. ಈ ಘಟನೆ ದೇಶದಲ್ಲಿ ನಡೆಯಲು ಕಾರಣ ತುಷ್ಟೀಕರಣದ ರಾಜನೀತಿಯಾಗಿದೆ. ಇಂಥಹ ಘಟನೆ ಖಂಡಿಸ್ತೇನೆ, ಇದರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಆಗ್ರಹಿಸಿದರು.