ಬಿಎಸ್ವೈ ಡೈರಿ ಬಗ್ಗೆ ಚರ್ಚೆಗೆ ಸಿದ್ಧ ಅಂತ ಕೈ ಪಾಳೆಯಕ್ಕೆ ಸವಾಲೆಸೆದ ಚೌಕಿದಾರರು
ಶನಿವಾರ, 23 ಮಾರ್ಚ್ 2019 (16:21 IST)
ಬಿ.ಎಸ್.ಯಡಿಯೂರಪ್ಪ ಅವರದ್ದು ಅಂತ ಕಾಂಗ್ರೆಸ್ ಹೇಳುತ್ತಿರುವ ಡೈರಿ ಕುರಿತು ವಾದ ಪ್ರತಿವಾದ ತೀವ್ರಗೊಂಡಿದೆ. ಡೈರಿ ಕುರಿತು ಎಲ್ಲಾ ಚೌಕಿದಾರರು ಚರ್ಚೆಗೆ ಸಿದ್ಧ ಅಂತ ಕಾಂಗ್ರೆಸ್ ಮುಖಂಡರಿಗೆ ಸವಾಲು ಹಾಕಿದ್ದಾರೆ.
ಹಲವಾರು ನಕಲಿ ಡೈರಿಗಳು ಹೊರಬರುತ್ತಲೇ ಇವೆ. ಕಳೆದ ಒಂದು ವರ್ಷದ ಹಿಂದೆ ಗೋವಿಂದ ರಾಜು ಮೇಲೆ ಐಟಿ ದಾಳಿ ಆದ ನಂತರ ಇಂತಹ ಫೇಕ್ ಡೈರಿಗಳು ಬರುತ್ತಿವೆ. ಬಿ.ಎಸ್.ಯಡಿಯೂರಪ್ಪನವರ ಮನೆಯ ಕೋಣೆಯೊಳಗೆ ಇರಬೇಕಾದ ಡೈರಿ ಕಾಂಗ್ರೆಸ್ ನಾಯಕರ ಕೈಗೆ ಹೇಗೆ ತಲುಪಿತು. ಕಾಂಗ್ರೆಸ್ ನ ಈ ಕೃತ್ಯದ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ. ಡೈರಿ ಸಂಬಂಧ ಯಾವುದೇ ತನಿಖೆಗೆ ನಾವು ಸಿದ್ಧ ಅಂತ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಇದು ನೋಟು ಅಮಾನ್ಯೀಕರಣದ ಮೊದಲು ಬರೆದಿರುವ ಡೈರಿ. ಹಾಗಾಗಿ ಹಣ ಹೆಚ್ಚು ನಮೂದು ಮಾಡಿದ್ದಾರೆ. ಕಾಂಗ್ರೆಸ್ಸಿಗರು ಮತ್ತೊಂದು ತಪ್ಪು ಮಾಡಿ ಸಿಕ್ಕಿಹಾಕಿಕೊಂಡಿದ್ದಾರೆ .ಇದರ ವಿರುದ್ಧ ಬಿಜೆಪಿಯ ಎಲ್ಲ ಚೌಕಿದಾರರು ಚರ್ಚೆಗೆ ಸಿದ್ಧವಿದ್ದೇವೆ. ಇದನ್ನು ಚುನಾವಣಾ ವಿಷಯವಾಗಿಯೂ ತೆಗೆದುಕೊಳ್ಳುತ್ತೇವೆ. ಕರ್ನಾಟಕ ಸರ್ಕಾರದಲ್ಲಿ ಹಲವಾರು ದೊಡ್ಡ ಹಗರಣಗಳು ನಡೆದಿವೆ.
ಉತ್ತರ ಪ್ರದೇಶ ಚುನಾವಣೆಗೆ ಸ್ಟೀಲ್ ಬ್ರಿಡ್ಜ್ ಕಟ್ಟಲು ಹೊರಟಿದ್ದನ್ನು ನಾವು ಮರೆತಿಲ್ಲ. ಸಚಿವ ಪುಟ್ಟರಂಗಶೆಟ್ಟರ ಆಪ್ತ ಸಹಾಯಕನ ಬಳಿ ವಿಧಾನಸೌಧದಲ್ಲೇ ಹಣ ಸಿಕ್ಕಿದ್ದನ್ನು ನಾವು ಮರೆತಿಲ್ಲ. ಗ್ರಾಮೀಣಾಭಿವೃದ್ದಿ ಇಲಾಖೆಯ ಇಂಜಿನಿಯರ್ ಗಳ ಬಳಿ ಕರೆನ್ಸಿ ಸಿಕ್ಕಿದ್ದೂ ಮರೆತಿಲ್ಲ. ಜನಮೂರ್ಖರಲ್ಲ. ನಿಜವಾದ ಚರ್ಚೆಗೆ ಬನ್ನಿ ಎಂದು ಕಾಂಗ್ರೆಸ್ ಗೂ ಎಚ್ಚರಿಸುತ್ತಿದ್ದೇನೆ ಅಂತ ಲಿಂಬಾವಳಿ ಹೇಳಿದ್ದಾರೆ.