ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಜೀವಾವಧಿ ಕಠಿಣ ಶಿಕ್ಷೆ, 1.50 ಲಕ್ಷ ದಂಡ
ಗುರುವಾರ, 20 ಡಿಸೆಂಬರ್ 2018 (18:34 IST)
ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಅತ್ಯಾಚಾರವೆಸಗಿದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಗಂವ್ಹಾರ ಗ್ರಾಮದ ನಿವಾಸಿಯಾಗಿರುವ ಆರೋಪಿ ಫಿರೋಜಖಾನ ತಂದೆ ಗುಡುಸಾಬ್ ನಾಟೀಕರ ಎಂಬಾತನನ್ನು ವಿವಿಧ ಕಲಂನಡಿ ಕಠಿಣ ಜೀವಾವಧಿ ಶಿಕ್ಷೆ ಹಾಗೂ 1.50 ಲಕ್ಷ ರೂ. ದಂಡ ವಿಧಿಸಿ ಕಲಬುರಗಿ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಗೋಪಾಲಪ್ಪ ಎಸ್. ತೀರ್ಪು ನೀಡಿದ್ದಾರೆ.
25 ವರ್ಷದ ಆರೋಪಿ ಫಿರೋಜಖಾನ ತಂದೆ ಗುಡುಸಾಬ್ ನಾಟೀಕರ 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ ಎಂದು ಪುಸಲಾಯಿಸಿ ಅವಳ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಅತ್ಯಾಚಾರವೆಸಗಿದ್ದ.
ಆರೋಪಿ ಎಸಗಿರುವ ಅಪರಾಧ ರುಜುವಾತಾಗಿರುವ ಹಿನ್ನೆಲೆಯಲ್ಲಿ ಐ.ಪಿ.ಸಿ. ಕಲಂ 420 ಅಡಿಯಲ್ಲಿನ ಅಪರಾಧಕ್ಕೆ 7 ವರ್ಷ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ಮತ್ತು ಐ.ಪಿ.ಸಿ. ಕಲಂ 376(2)(ಎನ್) ಹಾಗೂ ಪೋಕ್ಸೋ ಕಾಯ್ದೆ ಕಲಂ 6 ಅಡಿಯಲ್ಲಿನ ಅಪರಾಧಕ್ಕೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.