ಮೃತಪಟ್ಟ ಕೋತಿ: ಕಣ್ಣೀರಿಟ್ಟ ವ್ಯಾಪಾರಿಗಳು

ಮಂಗಳವಾರ, 3 ಜುಲೈ 2018 (16:59 IST)
ಆ ಕೋತಿ ನಿತ್ಯವೂ ಹಣ್ಣಿನ ತಳ್ಳುಗಾಡಿ ಮಾರಾಟಗಾರರಿಗೆ ಕೀಟಲೆ ಮಾಡುತ್ತಿತ್ತು. ಆದ್ರೆ ಇಂದು ಬೆಳಿಗ್ಗೆ ವಿದ್ಯುತ್ ಟ್ರಾನ್ಸ್​​ಫಾರ್ಮರ್​ಗೆ ಸಿಲುಕಿ ಮೃತಪಟ್ಟಿತು. ನಿತ್ಯವೂ  ಪ್ರೀತಿಯಿಂದ ಗದರುತ್ತಿದ್ದ ಜನರು, ಇಂದು ಅದೇ ಕೋತಿ ಮೃತಪಟ್ಟಾಗ ಕಣ್ಣೀರಿಟ್ಟರು. ತಾವೇ ಮುಂದೆ ನಿಂತು ಅಂತ್ಯ ಸಂಸ್ಕಾರವನ್ನೂ ಮಾಡಿದ್ರು.  
 ಹೌದು. ಈ ಘಟನೆ ನಡೆದಿರುವುದು ಚಾಮರಾಜನಗರದ ಸಂಪಿಗೆ ರಸ್ತೆಯಲ್ಲಿ. ಇಂದು ಬೆಳಿಗ್ಗೆ ಅತ್ತಿಂದಿತ್ತ ಜಿಗಿಯುತ್ತಿದ್ದ ಕೋತಿ, ನೋಡನೋಡುತ್ತಿದ್ದಂತೆಯೇ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಸಿಲುಕಿ ಮೃತಪಟ್ಟಿತು. ಆಗ ಅಲ್ಲಿನ ಬೀದಿ ಬದಿ ವ್ಯಾಪಾರಿಗಳು ಕೋತಿ ಮೃತಪಟ್ಟಿದ್ದನ್ನು ನೋಡಿ ಅಯ್ಯಯ್ಯೋ ಎಂದು ಮರುಕಪಟ್ಟರು. ಎಲ್ಲರೂ ಸೇರಿ ತಳ್ಳುಗಾಡಿಯೊಂದನ್ನು ತಂದು, ಅದರ ಮೇಲೆ ಕೋತಿಯ ಶವವನ್ನು ಮಲಗಿಸಿ, ಅರಿಶಿನ ಕುಂಕುಮ ಹಾಕಿ ಪೂಜೆ ಮಾಡಿದ್ರು. ನಂತರ ಸಂಪಿಗೆ ರಸ್ತೆಯಲ್ಲೇ ಸಾರ್ವಜನಿಕರ ಅಂತಿಮ ದರ್ಶನಕ್ಕೂ ವ್ಯವಸ್ಥೆ ಮಾಡಿದ್ರು.
 
ಮನುಷ್ಯರು ಮೃತಪಟ್ಟಾಗ ಮಾಡುವಂತೆಯೇ ಕೋತಿಗೂ ಸಹ ಅಂತ್ಯ ಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಇನ್ನು ಹನ್ನೊಂದು ದಿನಗಳ ನಂತ್ರ ತಿಥಿ ಕಾರ್ಯವನ್ನೂ ಸಹ ಮಾಡಲು ಅಲ್ಲಿನ ಬೀದಿ ಬದಿ ವ್ಯಾಪಾರಿಗಳು ನಿರ್ಧರಿಸಿದ್ದಾರೆ. ತಮ್ಮ ಕೈಲಾದಷ್ಟು ಹಣವನ್ನು ಚಂದಾ ವಸೂಲಿ ಮಾಡಿ, ಆ ಹಣದಲ್ಲಿ ತಿಥಿ ಕಾರ್ಯ ನೆರವೇರಿಸಿ, ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲೂ ಸಹ ನಿರ್ಧರಿಸಿದ್ದಾರೆ.
 
  
ಒಂದೆಡೆ ಕೋತಿಯ ಸಾವು ಸಾರ್ವಜನಿಕರಿಗೂ ಬೇಸರ ತಂದಿದ್ದರೆ, ಆ ದಿನ ದುಡಿದ ಹಣದಲ್ಲಿ ಬದುಕುವ ಸಾಗಿಸಬೇಕಾದ ಅನಿವಾರ್ಯತೆ ಇರುವ ಬೀದಿ ಬದಿ ವ್ಯಾಪಾರಿಗಳು, ಇಂದು ಶವ ಸಂಸ್ಕಾರ ಮಾಡಿ, ಹನ್ನೊಂದನೇ ದಿನದ ತಿಥಿ ಕಾರ್ಯಕ್ಕೂ ಮುಂದಾಗಿರುವುದು ಅವರ ಹೃದಯ ವೈಶಾಲ್ಯವನ್ನು ತೋರಿಸುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ