ಬೆಂಗಳೂರು : ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನೀಡಿರುವ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯೊಡ್ಡಿರುವುದನ್ನು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ವಾಗತಿಸಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಗೆಲುವು ಎಂದು ಬಣ್ಣಿಸಿದ್ದು, ಜನರ ಆಯ್ಕೆಯನ್ನು ಪ್ರಶ್ನಿಸಿ ಹೊರಟಿದ್ದವರಿಗೆ ತಕ್ಕ ಉತ್ತರ ಸಿಕ್ಕಿದೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಅವರನ್ನು ಎಷ್ಟು ಬೇಗ ಸಂಸದ ಸ್ಥಾನದಿಂದ ತೆಗೆದರೋ ಅಷ್ಟೇ ಬೇಗ ತೀರ್ಪು ಬಂದಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ರಾಹುಲ್ ಗಾಂಧಿ ಜೈಲು ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ ನೀಡಿರುವುದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಗೆಲುವು. ಜನರ ಆಯ್ಕೆಯನ್ನು ಪ್ರಶ್ನಿಸಿ ಹೊರಟಿದ್ದವರಿಗೆ ತಕ್ಕ ಉತ್ತರ ಸಿಕ್ಕಿದೆ. ಇಡೀ ದೇಶದಲ್ಲಿ ಸುಪ್ರೀಂಕೋರ್ಟ್ ದೊಡ್ಡದು. ಯಾರಿಗಾದರೂ ಅನ್ಯಾಯವಾದರೆ ಸರಿಪಡಿಸುವ ಶಕ್ತಿ ಆ ಪೀಠಕ್ಕೆ ಇದೆ. ಇದಕ್ಕೆ ಇಂದಿನ ತೀರ್ಪೇ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.