ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

ಶುಕ್ರವಾರ, 22 ಮಾರ್ಚ್ 2019 (11:45 IST)
ಬಿಜೆಪಿ ಲೋಕಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುತ್ತಿರುವಂತೆ ಪಕ್ಷದಲ್ಲೇ ಭಿನ್ನಮತ ಭುಗಿಲೆದ್ದಿದೆ.
ಕಲಬುರ್ಗಿ ಲೋಕಸಭೆ ಬಿಜೆಪಿ ಟಿಕೆಟ್ ಉಮೇಶ ಜಾಧವ್ ಪಾಲಾದ ಹಿನ್ನೆಲೆಯಲ್ಲಿ ಕಮಲ ಪಾಳೆಯದಲ್ಲಿ ಅಸಮಧಾನ ಹೊರಬಂದಿದೆ.

ಜಾಧವ ಅವರ ರಾಜೀನಾಮೆ ಅಂಗೀಕಾರಕ್ಕೂ ಮುನ್ನವೇ ಟಿಕೇಟ್ ಘೋಷಿಸಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ನಮ್ಮ ಪಕ್ಷಕ್ಕೆ ಇಂತಹ ದುಸ್ಥಿತಿ ಬರಬಾರದಿತ್ತು. ಈಗಲೂ ಜಾಧವ್ ಕಾಂಗ್ರೆಸ್ ಶಾಸಕರಾಗಿದ್ದಾರೆ. ಹೀಗಿರಬೇಕಾದರೆ ಅವರಿಗೆ ಬಿಜೆಪಿ ಟಿಕೆಟ್ ಹೇಗೆ ಘೋಷಣೆ ಮಾಡಿತೋ ಗೊತ್ತಿಲ್ಲ.

ಒಂದು ವೇಳೆ ಅವರ ಶಾಸಕತ್ವ ಅನರ್ಹಗೊಂಡರೆ ಬಿಜೆಪಿಗೆ ದೊಡ್ಡ ಮುಖಭಂಗವಾಗುತ್ತದೆ. ಇಂತಹ ವಿಚಾರಗಳನ್ನು ಬಿಜೆಪಿ ನಾಯಕರು ಗಣನೆಗೆ ತೆಗೆದುಕೊಳ್ಳದಿರೋದು ದುರ್ದೈವದ ಸಂಗತಿ. ಉಮೇಶ ಜಾಧವ್ ಗೆ ರತ್ನಗಂಬಳಿ ಹಾಕಿ ಕರೆಯುವ ಅವಶ್ಯಕತೆ ಇರಲಿಲ್ಲ. ಪಕ್ಷಕ್ಕಾಗಿ ದುಡಿದವರಿಗೆ ಆದ್ಯತೆ ನೀಡೋದು ಬಿಟ್ಟು ಪಕ್ಷಾಂತರಿಗಳಿಗೆ ಮಣೆ ಹಾಕಲಾಗಿದೆ. ಹೀಗಂತ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಬಾಬುರಾವ್ ಚವ್ಹಾಣ ಕಿಡಿಕಾರಿದ್ದಾರೆ.

ಮುಂದಿನ ದಿನಗಳಲ್ಲಿ ಇದಕ್ಕಾಗಿ ಪಕ್ಷ ದೊಡ್ಡ ದಂಡ ತೆರಬೇಕಾಗುತ್ತದೆ ಅಂತಾನೂ ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಾಬುರಾವ್ ಚವ್ಹಾಣ ಎಚ್ಚರಿಕೆ ನೀಡಿದ್ದಾರೆ.

ಜಾಧವ್ ಟಿಕೆಟ್ ಘೋಷಣೆಯಾಗುತ್ತಿದ್ದಂತೆಯೇ ಬಿಸಿಲೂರಿನ ಬಿಜೆಪಿಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗತೊಡಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ