ನಿಲ್ಲೊಲ್ಲ ಎಂದಿದ್ದೆ ಆದರೆ ಒತ್ತಡ ಹೆಚ್ಚಾಗಿದೆ ಎಂದ ಮಾಜಿ ಸಚಿವ
ಶುಕ್ರವಾರ, 15 ಮಾರ್ಚ್ 2019 (18:19 IST)
ಈ ಹಿಂದೆ ಚುನಾವಣೆ ಸಾಕಾಗಿದೆ ನಿಲ್ಲೊಲ್ಲ ಅಂದಿದ್ದೆ. ಮತ್ತೆ ಒತ್ತಡ ಹೆಚ್ಚಾಗ್ತಿದೆ. ಬಹಳ ಒತ್ತಡದಿಂದ ನಿಲ್ಲಲೇಬೇಕು ಅಂತಿದ್ದಾರೆ. 17 ಜನ ಆಕಾಂಕ್ಷಿಗಳಿದ್ದಾರೆ, ಅವರೆಲ್ಲರೂ ಒತ್ತಡ ಹೇರಿದ್ದಾರೆ. ಹಾಗಾಗಿ ಇವತ್ತು ಪಕ್ಷದ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿದ್ದೀನಿ. ಹೀಗಂತ ಮಾಜಿ ಸಚಿವ ಹೇಳಿದ್ದಾರೆ.
ಶ್ರೀನಿವಾಸ ಪ್ರಸಾದ್ ಹೇಳಿಕೆ ನೀಡಿದ್ದು, ಚಾಮರಾಜನಗರದಿಂದ ಸ್ಪರ್ಧೆಗೆ 17 ಆಕಾಂಕ್ಷಿಗಳಿದ್ದರು. ಹಾಗಾಗಿ ನಾನೂ ಕೂಡ ಚುನಾವಣಾ ರಾಜಕಾರಣ ಬೇಡ ಎಂದು ನಿರ್ಧರಿಸಿದ್ದೆ. ಆದರೆ ಅಷ್ಟೂ ಆಕಾಂಕ್ಷಿಗಳು ನನ್ನನ್ನು ಸ್ಪರ್ಧಿಸಲು ಒತ್ತಾಯಿಸಿ ತಾವು ಹಿಂದೆ ಸರಿದಿದ್ದಾರೆ. ಬೆಂಬಲಿಗರ ಒತ್ತಾಯಕ್ಕೆ ಮಣಿದು ಸ್ಪರ್ಧೆಗೆ ಒಪ್ಪಿದ್ದೇನೆ. ಈ ಸಂಬಂಧ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದೇನೆ. ಅವರೊಂದಿಗೆ ಚರ್ಚೆಯ ನಂತರ ದುಗುಡದಲ್ಲಿದ್ದ ನಾನು ಒಂದು ರೀತಿಯಲ್ಲಿ ನಿರಾಳವಾಗಿದ್ದೇನೆ.
ನನ್ನ ಬೆಂಬಲಿಗರೊಂದಿಗೆ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ ಎಂದಿದ್ದಾರೆ. ಚಾಮರಾಜನಗರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ವಿಚಾರ ಅಂತಿಮವಾಗಿ ನಿರ್ಧಾರ ಪಕ್ಷಕ್ಕೆ ಬಿಟ್ಟದ್ದು. ಯಡಿಯೂರಪ್ಪ ಜೊತೆ ಮಾತುಕತೆ ನಂತರ ಸಮಾಧಾನ ಆಗಿದೆ. ಐವತ್ತು ವರ್ಷ ಕೆಲಸ ಮಾಡಿದ ಅನುಭವ ಇದೆ. ಪಕ್ಷದ ನಿರ್ಧಾರಕ್ಕೆ ಅನುಗುಣವಾಗಿ ನಡೆದುಕೊಳ್ತೇನೆ ಎಂದು ಹಿರಿಯ ನಾಯಕ ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.