ಆಕೆಗೆ ಇನ್ನೂ 8 ವರ್ಷಗಳು. ಬದುಕಿ ಬಾಳಬೇಕಿದ್ದ ಬಾಲಕಿ. ಆದರೆ ಆಗಬಾರದ್ದು ಆದ ಪರಿಣಾಮ ಮರಳಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾಳೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದ ಹಿರೇಕೆರೆ ನೀರಿನ ಸೆಳವಿನಲ್ಲಿ ತೇಲಿ ಹೋಗಿದ್ದ 8 ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.
ಶ್ರೀದೇವಿ ಹನುಮಂತಪ್ಪ ಗಾಣಿಗೇರ ಮೃತದೇಹ ಇದೀಗ ತೇಲಿ ಹೋದ ಸ್ಥಳದ ಸುಮಾರು ಒಂದೂವರೆ ಕಿ.ಮೀ.ಅಂತರದಲ್ಲಿ ಪತ್ತೆಯಾಗಿದೆ.
ಅಗಸ್ಟ್ 6 ರಂದು ಈ ಬಾಲಕಿ ನೀರಿನ ಸೆಳವಿಗೆ ಸಿಕ್ಕು ತೇಲಿ ಹೋಗಿದ್ದಳು. ಅಂದಿನಿಂದ ನಿರಂತರವಾಗಿ ಎನ್ ಡಿ ಆರ್ ಎಫ್ ಹಾಗೂ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿದ್ದರು. ಬಾಲಕಿಯ ದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಬಾಲಕಿಯ ಕುಟುಂಬಕ್ಕೆ ಶೀಘ್ರವೇ ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.