ಬರ್ತಡೇ ಹಣವನ್ನು ಸಂತ್ರಸ್ಥರಿಗೆ ಪರಿಹಾರ ನೀಡಿದ ಬಾಲಕಿ

ಮಂಗಳವಾರ, 27 ಆಗಸ್ಟ್ 2019 (17:02 IST)
ಬರ್ತ್‌ ಡೇ ಅಂದರೆ ಕೇಕ್‌ ಹಂಚಿ, ಹೊಸ ಧಿರಿಸು ತೊಟ್ಟು ಸಂಭ್ರಮಪಡೋರೇ ಹೆಚ್ಚು. ಆದರೆ ಇಲ್ಲೊಬ್ಬಳು 10 ವರ್ಷದ ಬಾಲಕಿ ಮಾದರಿಯಾಗಿದ್ದಾಳೆ.

ಬಾಲಕಿ ತನ್ನ ಜನ್ಮದಿನಕ್ಕೆ ಅಜ್ಜಿ ನೀಡಿದ 10 ಸಾವಿರ ರೂಪಾಯಿ ಉಡುಗೊರೆ ಹಣವನ್ನು ಪ್ರವಾಹ ಸಂತ್ರಸ್ತರ ನೆರವಿಗೆ ದೇಣಿಗೆಯಾಗಿ ನೀಡಿ ವಿಭಿನ್ನತೆ ಮೆರೆದಿದ್ದಾಳೆ. ಮಂಗಳೂರಿನ ತಲಪಾಡಿ ಸಮೀಪದ ಕಿನ್ಯಾದಲ್ಲಿರುವ ಶಾರದಾ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಸನ್ಮತಿ ಬರ್ತ್ ಡೇ ಪ್ರಯುಕ್ತ ನೆರೆಸಂತ್ರಸ್ತರಿಗೆ ದೇಣಿಗೆ ನೀಡಿದವಳು. ಕೆಲವು ದಿನಗಳಿಂದ ಪ್ರತಿನಿತ್ಯ ಮಾಧ್ಯಮಗಳಲ್ಲಿ ನೆರೆ ಸಂತ್ರಸ್ತರ ಬವಣೆಯನ್ನು ಗಮನಿಸುತ್ತಿದ್ದ ಈಕೆ ಮನೆ ಮಂದಿಯೂ ಪರಿಹಾರ ಕಾರ್ಯಕ್ಕೆ ನೆರವಾದ ಬಗ್ಗೆ ತಿಳಿದು ತನ್ನದೂ ಅಳಿಲು ಸೇವೆ ಇರಬೇಕು ಎಂದು ನಿರ್ಧರಿಸಿದ್ದಳು.

ಆಗಸ್ಟ್ 25ರಂದು ಈಕೆಯ ಜನ್ಮದಿನ. ತಂದೆ- ತಾಯಿ ಉಡುಗೊರೆಯಾಗಿ ಹೊಸ ಉಡುಗೆ ನೀಡಿದ್ದರು. ಕುತ್ತಾರು ಪದವಿನ ಮನೆಯಲ್ಲಿ ಜನ್ಮದಿನಾಚರಣೆಯೂ ನಡೆದಿತ್ತು. ಅಜ್ಜಿ ತನ್ನ ಉಡುಗೊರೆಯಾಗಿ 10 ಸಾವಿರ ರೂಪಾಯಿಯ ಚೆಕ್‌ ನೀಡಿದ್ದರು.

ಇದನ್ನು ಹಿಡಿದುಕೊಂಡು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಗೆ ಶಾಲಾ ಸಮವಸ್ತ್ರದಲ್ಲೇ ತೆರಳಿದ ಸನ್ಮತಿ, ಅಜ್ಜಿ ಕೊಟ್ಟ ಚೆಕ್ಕನ್ನು ಜಿಲ್ಲಾಧಿಕಾರಿಗೆ ನೀಡಿದ್ದಾಳೆ. ಬಾಲಕಿಯ ಹೃದಯವಂತಿಕೆಗೆ ಮೆಚ್ಚಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಬೆನ್ನು ತಟ್ಟಿದರು. ಸನ್ಮತಿ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ರ ಮೊಮ್ಮಗಳು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ