ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪ ಸಹಜ. ಆದ್ರೆ ಆಣೆ.. ಹಣೆ ಬರಹದಂತ ಭಾನಾತ್ಮಕ ಮಾತುಗಳು ಚುನಾವಣೆ ಸಂದರ್ಭದಲ್ಲಿ ಈಗ ಬಲವಾಗಿ ಕೇಳಿ ಬರುತ್ತಿವೆ.
ತುಮಕೂರಿನಲ್ಲಿ ಹಾಲಿ ಸಂಸದ ಕಾಂಗ್ರೆಸ್ ಎಸ್.ಪಿ.ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಲು ನಮ್ಮಮ್ಮನಾಣೆ ನಾನು ಕಾರಣ ಅಲ್ಲಾ ಅಂತಾ ಮಾಜಿ ಶಾಸಕ, ಜೆಡಿಎಸ್ ಮುಖಂಡ ಎಚ್.ನಿಂಗಪ್ಪ ತಮ್ಮ ಅಸಹಾಯಕತೆಯನ್ನ ತೋಡಿಕೊಂಡಿದ್ದಾರೆ. ತುಮಕೂರಿನ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ನಾನು ಮುದ್ದಹನುಮೇಗೌಡರಿಗೆ ಬೇಡ ಅಂತಾ ಎಲ್ಲೂ ಹೇಳಿಲ್ಲಾ. ಹೇಳೋದೂ ಇಲ್ಲಾ. ನಾನು ಯಾರನ್ನೂ ದ್ವೇಷ ಮಾಡಲ್ಲಾ.
ನಮಗೆ ದೇವರು ಏನಿಟ್ಟಿದ್ದಾನೋ ಯಾರಿಗೆ ಗೊತ್ತು. ಅವರವರ ಯೋಗ ಸಾರ್. ಅದನ್ನ ತಪ್ಪಿಸೋಕೆ ಯಾರಿಂದಲೂ ಆಗೋದಿಲ್ಲಾ. ನಾನು ರಾಜಕೀಯದಲ್ಲಿ ಎಷ್ಟು ಹೋರಾಟ ಮಾಡಿಕೊಂಡು ಬಂದಿದೀನಿ. ಆದ್ರೆ ನಾನು ಮಾಜಿಯಾಗಿದ್ದೀನಿ. ಅದೂ ನನ್ನ ಹಣೆಬರಹ. ಮುದ್ದಹನುಮೇಗೌಡರು 10 ವರ್ಷ ಶಾಸಕರಾಗಿ 5 ವರ್ಷ ಸಂಸದರಾಗಿದ್ದಾರೆ. ಅವರು ಚೆನ್ನಾಗಿಯೇ ಇದ್ದಾರೆ. ಅವರು ಅವರ ಹಣೆ ಬರಹ. ಅವರ ಹಣೆ ಬರಹ ಕಿತ್ತುಕೊಳ್ಳಲು ನನ್ನಿಂದಾಗುತ್ತಾ? ಆದ್ರಿಂದ ನಾನು ಅವರನ್ನ ವಿರೋಧ ಮಾಡಿಲ್ಲಾ. ಮಾಡೋದೂ ಇಲ್ಲಾ ಅಂದ್ರು.
ಯಾರೇ ಅಭ್ಯರ್ಥಿಯಾದ್ರೂ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಕೆಲಸ ಮಾಡಬೇಕಿದೆ. ಇದು ಮೈತ್ರಿ ಸರ್ಕಾರದ ಮೈತ್ರಿ ಧರ್ಮ ಪಾಲನೆ ನಮ್ಮೆಲ್ಲ ಕರ್ತವ್ಯ ಅಂದ್ರು.