ಮತದಾರರ ಹೆಸರನ್ನು ಡಿಲೀಟ್ ಮಾಡಿಲ್ಲ-ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ
ಜಾತಿ, ಧರ್ಮದ ಆಧಾರದಲ್ಲಿ ಕೆಲ ಸಮುದಾಯದ ಹೆಸರನ್ನು ಮತಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸ್ಪಷ್ಟನೆ ನೀಡಿದ್ದಾರೆ. ನಿರ್ದಿಷ್ಟ ಸಮುದಾಯಗಳ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ ಎಂಬ ವರದಿ ಸುಳ್ಳು. ಮತದಾರರ ಪಟ್ಟಿ ಯಾರೊಬ್ಬರ ಜಾತಿ, ಧರ್ಮದ ಮಾಹಿತಿಯನ್ನು ಹೊಂದಿಲ್ಲ. ನಿಧನರಾದ ಸ್ಥಳಾಂತರಗೊಂಡವರ ಹೆಸರುಗಳನ್ನು ನಿಯಮದಂತೆ ಡಿಲೀಟ್ ಮಾಡಲಾಗಿದೆ. ಒಂದೇ ವ್ಯಕ್ತಿಗೆ ಅನೇಕ ಹೆಸರಿರುವ ಸಾಧ್ಯತೆಯ ಬಗ್ಗೆ ಸಾಫ್ಟ್ವೇರ್ ಬಳಸಿ ಪತ್ತೆ ಮಾಡಲಾಗುತ್ತದೆ. ಅಂತಹ ಪ್ರಕರಣಗಳಲ್ಲಿ ಹೆಸರನ್ನು ಡಿಲೀಟ್ ಮಾಡಲಾಗಿದೆ ಎಂದು ತಿಳಿಸಿದರು. ಈಗಾಗಲೇ 2023 ಮತದಾರರ ಪಟ್ಟಿಯ ಕರುಡನ್ನು ಸಾರ್ವಜನಿಕ ಆಕ್ಷೇಪಣೆ ಸಲ್ಲಿಸಲು ಪ್ರಕಟಿಸಲಾಗಿದೆ. ಡಿಸೆಂಬರ್ 12ರ ವರೆಗೆ ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ ಹೆಸರು ಬಿಟ್ಟು ಹೋದವರು ಅರ್ಜಿ ಸಲ್ಲಿಸಿ ತಮ್ಮ ಹೆಸರನ್ನು ಸೇರಿಸುವುದು, ಸರಿಪಡಿಸುವುದು, ಹೊಸ ವಿಳಾಸಕ್ಕೆ ಹೆಸರು ಸ್ಥಳಾಂತರಿಸಬಹುದು ಎಂದು ಸೂಚಿಸಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷ, ಚಿಲುಮೆ ಸಂಸ್ಥೆಯು ಮತದಾರರ ಪಟ್ಟಿ ಪರಿಷ್ಕರಣೆ ಮಾಡಿ ಖಾಸಗಿ ಮಾಹಿತಿ ಸಂಗ್ರಹಿಸುತ್ತಿರುವುದಾಗಿ ಗಂಭೀರ ಆರೋಪ ಮಾಡಿದೆ. KPCC ಈ ಬಗ್ಗೆ ಚುಣಾವಣಾ ಆಯೋಗಕ್ಕೆ ದೂರು ನೀಡಿದ್ದು, FIR ಕೂಡ ದಾಖಲಾಗಿದೆ.