ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ತಯಾರಿಸಿ ಮಾರುತ್ತಿದ್ದ ಜಾಲ
ಸೋಮವಾರ, 29 ನವೆಂಬರ್ 2021 (20:58 IST)
ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ತಯಾರಿಸಿ ಮಾರುತ್ತಿದ್ದ ಜಾಲವನ್ನು ಭೇದಿಸಿರುವ ಅಮೃತಹಳ್ಳಿ ಠಾಣೆ ಪೆÇಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಮರಿಯಣ್ಣಪಾಳ್ಯದ ಎಂ. ರಾಕೇಶ್ (37), ಹೆಬ್ಬಾಳದ ಕೆಂಪಾಪುರದ ಕೃಷ್ಣ (27), ಹನುಮಂತಪ್ಪ ಲೇಔಟ್‍ನ ತನ್ಮಯ್ ದೇಬ್‍ರಾಯ್ (33), ಎಚ್‍ಬಿಆರ್ ಲೇಔಟ್‍ನ ಹೈದರ್ ಅಲಿ ಬಂಧಿತರು. ಆರೋಪಿಗಳಿಂದ ಪಿಯುಸಿ ಹಾಗೂ ನಾನಾ ವಿವಿಗಳ ಪದವಿ, ಸ್ನಾತಕೋತ್ತರ ಪದವಿ ಅಂಕಪಟ್ಟಿಗಳು, ಸೀಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿದ್ದು, ತಲೆಮರೆಸಿಕೊಂಡಿರುವವರ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೆÇಲೀಸರು ತಿಳಿಸಿದರು.
ಹೆಬ್ಬಾಳ ಕೆಂಪಾಪುರದಲ್ಲಿ `ಡ್ರೀಮ್ ಎಜುಕೇಷನ್ ಸರ್ವೀಸಸ್' ಎಂಬ ಹೆಸರಿನಲ್ಲಿ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುವ ದಂಧೆ ನಡೆಯುತ್ತಿದ್ದು, ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಚ್.ಎಸ್.ಮನುಕುಮಾರ್ ಎಂಬುವರು ದೂರು ನೀಡಿದ್ದರು. ಈ ದೂರಿನ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, ಅಂಕಪಟ್ಟಿ ಸೀಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಾನಾ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಕೇಂದ್ರಗಳು:
ಆರೋಪಿಗಳು, ಡ್ರೀಮ್ ಎಜುಕೇಷನ್ ಸರ್ವೀಸಸ್, ಶ್ರೀ ವಿನಾಯಕ ಎಜುಕೇಷನ್ ಕನ್ಸಲ್ಟೆನ್ಸಿ, ಶ್ರೀ ವಿನಾಯಕ ಎಜುಕೇಷನ್ ಅಕಾಡೆಮಿ, ಸಾಗರಂ ಚಾರಿಟಬಲ್ ಟ್ರಸ್ಟ್, ಚಾರುಹಾಸಿನಿ ಕನ್ಸಲ್ಟೆನ್ಸಿ ಎಂಬ ನಾನಾ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಕೇಂದ್ರಗಳನ್ನು ತೆರೆದು ದೇಶದ ನಾನಾ ವಿವಿಗಳ ಹೆಸರಿನಲ್ಲಿ ಅಂಕಪಟ್ಟಿ ತಯಾರಿಸಿದ್ದರು. ಈ ಎಲ್ಲ ಅಂಕಪಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಯಾವ್ಯಾವ ವಿವಿಗಳು?:
ಹಿಮಾಚಲ ಪ್ರದೇಶದ ಐಇಸಿ ವಿವಿ, ಹಿಮಾಚಲ ವಿವಿ, ಮೀರತ್‍ನ ಚೌಧರಿ ಚರಣ್‍ಸಿಂಗ್ ವಿವಿ, ಉತ್ತರಪ್ರದೇಶದ ಛತ್ರಪತಿ ಸಾಹೂ ಮಹಾರಾಜ್ ವಿವಿ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಶಿವಮೊಗ್ಗದ ಕುವೆಂಪು ವಿವಿ, ದೆಹಲಿಯ ಮಹಾಮಾಯ ವಿವಿ, ಮೇಘಾಲಯದ ವಿಲಿಯಂ ಕ್ಯಾರಿ ವಿವಿ, ಛತ್ತೀಸ್‍ಘಡದ ಕಳಿಂಗ ವಿವಿ, ಪುದುಚೆರಿಯ ಪಾಂಡಿಚೆರಿ ವಿವಿ, ಸಿಕ್ಕಿಂನ ಸಿಕ್ಕಿಂ ಸ್ಟೇಟ್ ವಿವಿ, ಅಲಹಾಬಾದ್ ವಿವಿ, ತಮಿಳುನಾಡಿನ ಪೆರಿಯಾರ್ ವಿವಿ, ಬೆಂಗಳೂರು ವಿವಿಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ತಯಾರಿಸಲಾಗುತ್ತಿತ್ತು.
ಎಸ್‍ಎಸ್‍ಎಲ್‍ಸಿ, ಪಿಯುಸಿ ಬೋರ್ಡ್‍ಗಳು:
ಕೇರಳ ಬೋರ್ಡ್ ಆಫ್ ಪಬ್ಲಿಕ್ ಎಕ್ಸಾಮಿನೇಷನ್, ಯುಪಿ ಬೋರ್ಡ್ ಆಫ್ ಎಕ್ಸಾಮಿನೇಷನ್, ಹುಬ್ಬಳ್ಳಿ ಬೋರ್ಡ್ ಆಫ್ ಎಕ್ಸಾಮಿನೇಷನ್, ತಮಿಳುನಾಡು ಬೋರ್ಡ್ ಆಫ್ ಎಕ್ಸಾಮಿನೇಷನ್, ಬಿಹಾರ ಸ್ಯಾನ್ಸ್ಕ್ರೀಟ್ ಬೋರ್ಡ್, ಬಿಹಾರ್ ಬೋರ್ಡ್ ಆಫ್ ಓಪನ್ ಸ್ಕೂಲಿಂಗ್, ಬೋರ್ಡ್ ಆಫ್ ಹೈಯರ್ ಸೆಕೆಂಡರಿ ಎಜುಕೇಷನ್ ಡೆಲ್ಲಿ, ಜಾರ್ಖಂಡ್ ಸ್ಟೇಟ್ ಓಪನ್ ಸ್ಕೂಲ್ ರಾಂಚಿ. ಈ ಎಲ್ಲ ಕೇಂದ್ರಗಳಿಗೂ ಸಂಬಂಧಿಸಿದ ಒಟ್ಟು 682 ನಕಲಿ ಅಂಕಪಟ್ಟಿಗಳು, 18 ಟಿಸಿ (ವಲಸೆ ಪ್ರಮಾಣ ಪತ್ರಗಳು) ಗಳನ್ನು ಅಸಲು ಅಂಕಪಟ್ಟಿಗಳೆಂದು ನಂಬಿಸಿ ಮಾರಾಟ ಮಾಡುತ್ತಿದ್ದರು. ಎಸ್‍ಎಸ್‍ಎಲ್‍ಸಿ ಅಂಕಪಟ್ಟಿಗೆ 20 ಸಾವಿರ ರೂ., ಪಿಯುಸಿ ಅಂಕಪಟ್ಟಿಗೆ 25 ಸಾವಿರ ರೂ, ಪದವಿ ಅಂಕಪಟ್ಟಿಗಳನ್ನು 40 ಸಾವಿರ ರೂ.ಗಳಿಗೆ ಮಾರಾಟ ಮಾಡುತ್ತಿದ್ದರು.
ಇವುಗಳನ್ನು ತಯಾರಿಸಲು ಆಯಾ ವಿವಿ ಹಾಗೂ ಎಸ್‍ಎಸ್‍ಎಲ್‍ಸಿ ಬೋರ್ಡ್ ಹಾಗೂ ಪಿಯುಸಿ ಬೋರ್ಡ್‍ಗಳಿಗೆ ಸಂಬಂಧಿಸಿದ ರಬ್ಬರ್ ಸ್ಟಾಂಪ್‍ಗಳನ್ನು ಉಪಯೋಗಿಸಿಕೊಂಡು ನಕಲಿ ಅಂಕಪಟ್ಟಿ ತಯಾರಿಸುತ್ತಿದ್ದರು.